ಹಾಂಕಾಂಗ್‌ನಲ್ಲಿ ಭಯೋತ್ಪಾದನೆಯಂಥ ಕೃತ್ಯಗಳು: ಚೀನಾ ಆರೋಪ

Update: 2019-08-14 16:37 GMT

ಹಾಂಕಾಂಗ್, ಆ. 14: ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಎರಡನೇ ದಿನದ ಪ್ರತಿಭಟನೆಯ ವೇಳೆ ಪ್ರಜಾಪ್ರಭುತ್ವಪರ ಹೋರಾಟಗಾರರು ತನ್ನ ನಾಗರಿಕರ ಮೇಲೆ ‘ಭಯೋತ್ಪಾದನೆಯಂಥ’ ದಾಳಿಗಳನ್ನು ನಡೆಸಿದ್ದಾರೆ ಎಂದು ಚೀನಾ ಬುಧವಾರ ಹೇಳಿದೆ.

ಜಗತ್ತಿನ ಅತಿ ನಿಬಿಡ ಪ್ರಯಾಣ ಕೇಂದ್ರಗಳ ಪೈಕಿ ಒಂದಾಗಿರುವ ಹಾಂಕಾಂಗ್ ವಿಮಾನ ನಿಲ್ದಾಣವನ್ನು ಅಸ್ತವ್ಯಸ್ತಗೊಳಿಸಿರುವ ಪ್ರತಿಭಟನೆಗಳು ಮಂಗಳವಾರ ರಾತ್ರಿ ಪೊಲೀಸರೊಂದಿಗಿನ ಘರ್ಷಣೆಗಳೊಂದಿಗೆ ಕೊನೆಗೊಂಡಿವೆ. ಘರ್ಷಣೆಯ ವೇಳೆ, ಪ್ರತಿಭಟನಕಾರರು ಇಬ್ಬರು ವ್ಯಕ್ತಿಗಳನ್ನು ಥಳಿಸಿದ್ದಾರೆ ಎನ್ನಲಾಗಿದೆ.

ಪ್ರತಿಭಟನಕಾರರನ್ನು ಮಣಿಸಲು ಹಾಗೂ ಬೆದರಿಸಲು ಚೀನಾ ಸರಕಾರವು ಈ ಘಟನೆಯನ್ನು ತಕ್ಷಣ ಬಳಸಿಕೊಂಡಿದೆ.

ಹೆಚ್ಚಿನ ಸ್ವಾತಂತ್ರಕ್ಕಾಗಿ ಆಗ್ರಹಿಸಿ ಹಾಂಕಾಂಗ್‌ನಲ್ಲಿ ಪ್ರತಿಭಟನಕಾರರು 10 ವಾರಗಳಿಂದ ನಿರಂತರ ಪ್ರತಿಭಟನಕಾ ಪ್ರದರ್ಶನಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

‘‘ಈ ಭಯೋತ್ಪಾದನೆಯಂಥ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ’’ ಎಂದು ಚೀನಾದ ಸ್ಟೇಟ್ ಕೌನ್ಸಿಲ್‌ನ ಹಾಂಕಾಂಗ್ ಮತ್ತು ಮಕಾವೊ ವ್ಯವಹಾರಗಳ ವಕ್ತಾರೆ ಕ್ಸು ಲುಯಿಂಗ್ ಹೇಳಿದರು. ಥಳಿತಕ್ಕೊಳಗಾದ ಜನರು ಮಾತೃಭೂಮಿ ಚೀನಾದ ವಾಸಿಗಳು’’ ಎಂದು ಅವರು ನುಡಿದರು.

ಪ್ರತಿಭಟನೆಗಳನ್ನು ‘ಭಯೋತ್ಪಾದನೆ’ ಎಂಬುದಾಗಿ ಚೀನಾ ಹೇಳುತ್ತಿರುವುದು ಈ ವಾರದಲ್ಲಿ ಎರಡನೇ ಬಾರಿಯಾಗಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಹಾಂಕಾಂಗ್‌ನಲ್ಲಿ ಸೇನೆಯನ್ನು ನಿಯೋಜಿಸಲು ಚೀನಾ ಮಾಡುತ್ತಿರುವ ಸಿದ್ಧತೆ ಇದಾಗಿದೆ ಎಂಬ ಕಳವಳ ಎಲ್ಲೆಡೆ ವ್ಯಕ್ತವಾಗಿದೆ.

ಆ ಇಬ್ಬರು ವ್ಯಕ್ತಿಗಳು ಮಫ್ತಿಯಲ್ಲಿರುವ ಪೊಲೀಸ್ ಅಥವಾ ಬೇಹುಗಾರರು ಎಂಬ ಸಂಶಯದಲ್ಲಿ ಪ್ರತಿಭಟನಕಾರರು ಅವರನ್ನು ಥಳಿಸಿದ್ದಾರೆ ಎನ್ನಲಾಗಿದೆ.

ಹಾಂಕಾಂಗ್ ಗಡಿಯತ್ತ ಚೀನಾ ಸೈನಿಕರು: ಟ್ರಂಪ್:

ಚೀನಾವು ತನ್ನ ಪಡೆಗಳನ್ನು ಹಾಂಕಾಂಗ್ ಗಡಿಯತ್ತ ಸಾಗಿಸುತ್ತಿರುವುದನ್ನು ಅಮೆರಿಕದ ಗುಪ್ತಚರ ಇಲಾಖೆ ಖಚಿತಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಪ್ರತಿಭಟನೆಗಳು ತಾರಕಕ್ಕೇರಿರುವಂತೆಯೇ, ಶಾಂತಿ ಕಾಪಾಡಿಕೊಳ್ಳುವಂತೆ ಅವರು ಸಂಬಂಧಪಟ್ಟ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಪ್ರತಿಭಟನಕಾರರು ಹಾಂಕಾಂಗ್ ವಿಮಾನ ನಿಲ್ದಾಣಕ್ಕೆ ಸತತ ಎರಡನೇ ದಿನವೂ ಮುತ್ತಿಗೆ ಹಾಕಿರುವ ನಡುವೆಯೇ, ಗುಪ್ತಚರ ವರದಿಯನ್ನು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಹಾಂಕಾಂಗ್‌ಗೆ ಹೊಂದಿಕೊಂಡಿರುವ ಶೆಂಝನ್‌ಗೆ ಸೈನಿಕರನ್ನು ಹೊತ್ತ ವಾಹನಗಳು ಸಾಗುತ್ತಿರುವ ದೃಶ್ಯಗಳನ್ನು ಚೀನಾದ ಪತ್ರಿಕೆಗಳಾದ ‘ಗ್ಲೋಬಲ್ ಟೈಮ್ಸ್’ ಮತ್ತು ‘ಪೀಪಲ್ಸ್ ಡೇಲಿ’ ಪ್ರಸಾರಿಸಿವೆ.

ವಿಮಾನಗಳ ಹಾರಾಟ ಆರಂಭ:

ಪ್ರಜಾಪ್ರಭುತ್ವ ಪರ ಹೋರಾಟಗಾರರ ಧರಣಿಯಿಂದ ಹಾಂಕಾಂಗ್ ವಿಮಾನ ನಿಲ್ದಾಣದ ಚಟುವಟಿಕೆಗಳು ಸ್ತಬ್ಧಗೊಂಡ ಒಂದು ದಿನದ ಬಳಿಕ, ಬುಧವಾರ ಹೆಚ್ಚಿನ ವಿಮಾನಗಳು ಸಮಯಕ್ಕೆ ಸರಿಯಾಗಿ ಹಾರಾಟ ನಡೆಸಿವೆ.

 ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ಗಳಲ್ಲಿ ಪ್ರತಿಭಟನಕಾರರು ಜಮಾಯಿಸಿದ ಹಿನ್ನೆಲೆಯಲ್ಲಿ, ಮಂಗಳವಾರ ನೂರಾರು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಬುಧವಾರ ಬೆಳಗ್ಗಿನ ವೇಳೆಗೆ, ಹೆಚ್ಚಿನ ಸಂಖ್ಯೆಯ ಪ್ರತಿಭಟನಕಾರರು ವಿಮಾನ ನಿಲ್ದಾಣದಿಂದ ಹೊರಗೆ ಹೋಗಿದ್ದರು ಹಾಗೂ ವಿಮಾನಗಳು ನಿಗದಿತ ವೇಳಾಪಟ್ಟಿಯಂತೆ ಹಾರಾಟ ನಡೆಸಲು ಆರಂಭಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News