ವಿಕಲಚೇತನರ ಟಿ-20 ವಿಶ್ವಕಪ್

Update: 2019-08-14 17:42 GMT

ಹೊಸದಿಲ್ಲಿ, ಆ.14: ಸೋಪೊರ್‌ನ ಹುಸೈನ್ ಕುಟುಂಬ ಹಾಗೂ ಕಾಶ್ಮೀರದ ಅನಂತನಾಗ್‌ನ ಇಕ್ಬಾಲ್ ಮನೆಯವರು ಮೊಬೈಲ್‌ಫೋನ್ ರಿಂಗ್ ಆಗುವುದನ್ನು ಕಾಯುತ್ತಿದ್ದಾರೆ. ಕಳೆದ 11 ದಿನಗಳಿಂದ 20ರ ಹರೆಯದ ಆಮಿರ್ ಹುಸೈನ್ ಹಾಗೂ 25ರ ಹರೆಯದ ವಸೀಂ ಇಕ್ಬಾಲ್ ತಮ್ಮ ಮನೆಯವರೊಂದಿಗೆ ಫೋನ್‌ನಲ್ಲಿ ಮಾತನಾಡಿಲ್ಲ. ಈಗ ಅವರು ವಿಶ್ವಕಪ್ ಗೆದ್ದ ಸಂತಸವನ್ನು ಹಂಚಿಕೊಳ್ಳದ ಸ್ಥಿತಿಯಲ್ಲಿದ್ದಾರೆ.

ಆಮಿರ್ ಹಾಗೂ ಇಕ್ಬಾಲ್ ಮಂಗಳವಾರ ವಾರ್ಸೆಸ್ಟರ್‌ನಲ್ಲಿ ನಡೆದ ಮೊದಲ ಆವೃತ್ತಿಯ ವಿಕಲಚೇತನರ ವರ್ಲ್ಡ್ ಸಿರೀಸ್ ಕ್ರಿಕೆಟ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಜಯ ಸಾಧಿಸಿ ಚಾಂಪಿಯನ್‌ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿದ್ದಾರೆ.

  ಇದು ಇಬ್ಬರ ಜೀವನದ ಶ್ರೇಷ್ಠ ಕ್ಷಣ. ಆದರೆ, ಈ ಸಂತೋಷವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳದ ಸ್ಥಿತಿಯಲ್ಲಿದ್ದಾರೆ. ಆಗಸ್ಟ್ 5 ರಂದು ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಆ ರಾಜ್ಯದಲ್ಲಿ ಸಂಪರ್ಕ ಜಾಲಗಳನ್ನು (ದೂರವಾಣಿ ಹಾಗೂ ಅಂತರ್ಜಾಲ) ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.‘‘ಇದೇ ಮೊದಲ ಬಾರಿ ನಾನು ನನ್ನ ಹೆತ್ತವರಿಗೆ ಈದ್ ಶುಭಾಶಯ ಹೇಳಲು ಸಾಧ್ಯವಾಗಲಿಲ್ಲ. ನಾನು ಮನೆಯಿಂದ ದೂರವಾಗಿ 45 ದಿನಗಳು ಕಳೆದಿವೆ. ನಾವು ಮಹಾರಾಷ್ಟ್ರದ ಶಿರ್ಗಾಂವ್‌ನಲ್ಲಿ ಕ್ರಿಕೆಟ್ ಶಿಬಿರದಲ್ಲಿ ಭಾಗವಹಿಸಿದ್ದೆವು. ಕಳೆದ 10 ದಿನಗಳಿಂದ ನನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ನಾನೀಗ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದೇನೆ. ಆದರೆ, ನನ್ನ ಹೆತ್ತವರೊಂದಿಗೆ ಮಾತನಾಡದೇ ಚಿಂತಿತನಾಗಿದ್ದೇನೆ’’ ಎಂದು ಎಡಗೈ ಸ್ಪಿನ್ ಬೌಲರ್ ಆಮಿರ್ ಇಂಗ್ಲೆಂಡ್‌ನಿಂದ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. 12ನೇ ತರಗತಿಯ ವಿದ್ಯಾರ್ಥಿ ಆಮಿರ್ ಅಪಘಾತವೊಂದರಲ್ಲಿ ಬಲಗೈ ಕಳೆದುಕೊಂಡಿದ್ದಾರೆ. ‘‘ಈ ಟೂರ್ನಮೆಂಟ್ ನನ್ನ ಪಾಲಿಗೆ ಸ್ಮರಣೀಯವಾಗಿದೆ. ನಾನು ಒಟ್ಟು ಆರು ವಿಕೆಟ್‌ಗಳನ್ನು ಪಡೆದಿದ್ದೇನೆ. ಕೆಲವು ಪಂದ್ಯಗಳಲ್ಲಿ ಹೆಚ್ಚು ರನ್ ನೀಡಿರಲಿಲ್ಲ’’ಎಂದು ಆಮಿರ್ ಹೇಳಿದ್ದಾರೆ.

ವಸೀಂ ಇಕ್ಬಾಲ್‌ಗೆ ಆದಷ್ಟು ಬೇಗನೆ ಕಾಶ್ಮೀರದಲ್ಲಿರುವ ಮನೆಗೆ ವಾಪಸಾಗಿ ಹೆತ್ತವರನ್ನು ತಬ್ಬಿಕೊಳ್ಳಬೇಕೆಂಬ ಬಯಕೆಯಲ್ಲಿದ್ದಾರೆ.

‘‘ನನ್ನ ಮನಸ್ಸು ಕಾಶ್ಮೀರದಲ್ಲಿದೆ. ನನ್ನ ಹೆತ್ತವರು ಅಲ್ಲಿ ಚೆನ್ನಾಗಿದ್ದಾರೆಂಬ ವಿಶ್ವಾಸವಿದೆ. ನಾವು ಸೆಪ್ಟಂಬರ್ 17ಕ್ಕೆ ವಾಪಸಾಗುವ ನಿರೀಕ್ಷೆಯಿದೆ’’ಎಂದು ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಪಂದ್ಯವೊಂದರಲ್ಲಿ 43 ಎಸೆತಗಳಲ್ಲಿ 75 ರನ್ ಗಳಿಸಿರುವ ಇಕ್ಬಾಲ್ ಹೇಳಿದ್ದಾರೆ. ಭಾರತದ ಪರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿರುವ ಕಾಶ್ಮೀರದ ಏಕೈಕ ಕ್ರಿಕೆಟಿಗ ಪರ್ವೇಝ್ ರಸೂಲ್ ಈ ಇಬ್ಬರು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News