ಧನಂಜಯ ಸ್ಪಿನ್ ಮೋಡಿಗೆ ನ್ಯೂಝಿಲ್ಯಾಂಡ್ ತತ್ತರ

Update: 2019-08-14 17:46 GMT

ಗಾಲೆ, ಆ.14: ಮಳೆ ಬಾಧಿತ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ ಬೌಲಿಂಗ್ ದಾಳಿಗೆ ಸಿಲುಕಿದ ನ್ಯೂಝಿಲ್ಯಾಂಡ್ ಸಂಕಷ್ಟಕ್ಕೆ ಸಿಲುಕಿದೆ.

ಬುಧವಾರ ಇಲ್ಲಿ ಆರಂಭವಾದ ಟೆಸ್ಟ್ ಪಂದ್ಯ ಮಳೆಯಿಂದಾಗಿ ಬೇಗನೇ ಕೊನೆಗೊಂಡಾಗ ನ್ಯೂಝಿಲ್ಯಾಂಡ್ 68 ಓವರ್‌ಗಳಲ್ಲಿ 203 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ನ್ಯೂಝಿಲ್ಯಾಂಡ್ ಕಳೆದುಕೊಂಡ ಎಲ್ಲ ಐದು ವಿಕೆಟ್‌ಗಳು ಧನಂಜಯರ ಪಾಲಾದವು.

ಹಿರಿಯ ಬ್ಯಾಟ್ಸ್‌ಮನ್ ರಾಸ್ ಟೇಲರ್ ಔಟಾಗದೆ 86 ರನ್(131 ಎಸೆತ, 6 ಬೌಂಡರಿ)ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಿಚೆಲ್ ಸ್ಯಾಂಟ್ನರ್(ಔಟಾಗದೆ 8)ಟೇಲರ್‌ಗೆ ಸಾಥ್ ನೀಡುತ್ತಿದ್ದಾರೆ.

ಗಾಲೆಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಉಭಯ ತಂಡಗಳು ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿವೆ. ಸಂಶಯಾಸ್ಪದ ಬೌಲಿಂಗ್ ಶೈಲಿಯ ಕಾರಣಕ್ಕೆ ಈ ಹಿಂದೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ನಿಷೇಧಕ್ಕೆ ಒಳಗಾಗಿದ್ದ 25ರ ಹರೆಯದ ಧನಂಜಯ ಇಂದು 4ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದು ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದರು.

ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದ ಆರಂಭಿಕ ಬ್ಯಾಟ್ ್ಸಮನ್‌ಗಳಾದ ಟಾಮ್ ಲಥಾಮ್ (30) ಹಾಗೂ ಜೀತ್ ರಾವಲ್(33)ನ್ಯೂಝಿಲ್ಯಾಂಡ್‌ಗೆ ಉತ್ತಮ ಆರಂಭ ಒದಗಿಸಿದರು. ನಾಲ್ಕು ಎಸೆತಗಳ ಅಂತರದಲ್ಲಿ ಟಾಮ್ ಲಥಾಮ್(30) ಹಾಗೂ ವಿಲಿಯಮ್ಸನ್(0) ವಿಕೆಟನ್ನು ಉರುಳಿಸಿದ ಧನಂಜಯ ಆರಂಭದಲ್ಲೇ ಆಘಾತ ನೀಡಿದರು.

ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್ ರಾವಲ್ ವಿಕೆಟ್ ಪಡೆದ ಧನಂಜಯ ನ್ಯೂಝಿಲ್ಯಾಂಡ್ ತಂಡ ಭೋಜನ ವಿರಾಮದ ವೇಳೆಗೆ 71 ರನ್‌ಗೆ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.

93 ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವಿ ಆಟಗಾರ ಟೇಲರ್ ನಾಲ್ಕನೇ ವಿಕೆಟ್‌ಗೆ ಹೆನ್ರಿ ನಿಕೊಲ್ಸ್ ಜೊತೆ 100 ರನ್ ಜೊತೆಯಾಟ ನಡೆಸಿ ಕಿವೀಸ್ ಪ್ರತಿ ಹೋರಾಟ ನೀಡಲು ನೆರವಾದರು. ಈ ಜೋಡಿಯನ್ನು ಧನಂಜಯ ಬೇರ್ಪಡಿಸಿದರು.

ಸ್ವೀಪ್ ಶಾಟ್ ಹೊಡೆಯಲು ಮುಂದಾದ ನಿಕೊಲ್ಸ್ 42 ರನ್‌ಗೆ ಧನಂಜಯಗೆ ವಿಕೆಟ್ ಒಪ್ಪಿಸಿದರು. ನಿಕೊಲ್ಸ್ ಔಟಾದ ಬೆನ್ನಿಗೆ ವಿಕೆಟ್‌ಕೀಪರ್ ಬಿ.ಜೆ. ವಾಟ್ಲಿಂಗ್(1) ಕೂಡ ಪೆವಿಲಿಯನ್ ಹಾದಿ ಹಿಡಿದರು. ಈ ಮೂಲಕ ಆಫ್ ಸ್ಪಿನ್ನರ್ ಧನಂಜಯ ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ತನ್ನದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

► ನ್ಯೂಝಿಲ್ಯಾಂಡ್: 68 ಓವರ್‌ಗಳಲ್ಲಿ 203/5

(ರಾಸ್ ಟೇಲರ್ ಔಟಾಗದೆ 86, ನಿಕೊಲ್ಸ್ 42, ರಾವಲ್ 33, ಲಥಾಮ್ 30,ಧನಂಜಯ 5-57)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News