ಆಗಸ್ಟ್‌ನಲ್ಲಿ ಡಾಲರ್‌ನೆದುರು ಅತ್ಯಂತ ಕಳಪೆ ಸಾಧನೆಯ ಕರೆನ್ಸಿ ರೂಪಾಯಿ

Update: 2019-08-14 18:13 GMT

ಹೊಸದಿಲ್ಲಿ, ಆ.14: ಆಗಸ್ಟ್ ತಿಂಗಳಲ್ಲಿ ಭಾರತದ ರೂಪಾಯಿ ಅಮೆರಿಕದ ಡಾಲರ್‌ನೆದುರು ಅತ್ಯಂತ ಕಳಪೆ ಸಾಧನೆ ಪ್ರದರ್ಶಿಸಿದ ಕರೆನ್ಸಿಯ ಪಟ್ಟವನ್ನು ಪಡೆದಿದೆ. ಚೀನಾದ ಕರೆನ್ಸಿ ಯುವಾನ್‌ನ ಏರಿಳಿತಗಳು,ಬಗೆಹರಿಯದ ಜಾಗತಿಕ ವ್ಯಾಪಾರ ಸಮರ ಮತ್ತು ವಿದೇಶಿ ನಿಧಿಗಳ ಹೊರಹರಿವು ಇವು ರೂಪಾಯಿಯ ದುರ್ಗತಿಗೆ ಕಾರಣವಾಗಿವೆ. ಆಗಸ್ಟ್‌ನಲ್ಲಿ ಈವರೆಗೆ ಡಾಲರ್‌ನೆದುರು ರೂಪಾಯಿ ಮೌಲ್ಯ ಶೇ.3.49ರಷ್ಟು ಕುಸಿದಿದ್ದು,ನಾಲ್ಕು ವರ್ಷಗಳಲ್ಲಿ ತನ್ನ ಅತ್ಯಂತ ಕೆಟ್ಟ ಮಾಸಿಕ ನಷ್ಟ ದಾಖಲಿಸಲು ಸಜ್ಜಾಗುತ್ತಿದೆ. ಬುಧವಾರ ತಡರಾತ್ರಿ ಡಾಲರ್‌ನೆದುರು ರೂಪಾಯಿ ಮೌಲ್ಯ 71.25ರಷ್ಟಿತ್ತು.

 ರೂಪಾಯಿಯ ಚಲನೆಗೆ ಹಲವಾರು ಕಾರಣಗಳಿವೆಯಾದರೂ ಚೀನಾದ ಯುವಾನ್ ನಂ.1 ಕಾರಣವಾಗಿದೆ. ರೂಪಾಯಿ ಯುವಾನ್‌ನೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಇದರ ಜೊತೆಗೆ ಚೀನಾದ ಸರಕುಗಳ ಮೇಲೆ ಅಮೆರಿಕದ ಹೆಚ್ಚುವರಿ ತೆರಿಗೆ ಹೇರಿಕೆ,ಬಾಂಡ್ ಬೆಲೆಗಳಲ್ಲಿ ಮತ್ತು ಅಜೆಂಟಿನಾದ ಪೆಸೋ ಕುಸಿತ ಹಾಗೂ ಒಂಭತ್ತು ತಿಂಗಳುಗಳಲ್ಲಿ ಅತ್ಯಂತ ಬೃಹತ್ ಪ್ರಮಾಣದಲ್ಲಿ ವಿದೇಶಿ ಹಣದ ಹೊರಹರಿವು ಇವೂ ರೂಪಾಯಿಯ ಕಳಪೆ ಪ್ರದರ್ಶನಕ್ಕೆ ಕಾರಣಗಳಾಗಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News