“ಮೋದಿ, ಶಾ ಕೃಷ್ಣಾರ್ಜುನರಾಗಿದ್ದರೆ, ಪಾಂಡವರು ಮತ್ತು ಕೌರವರು ಯಾರು?"

Update: 2019-08-15 05:36 GMT

 ಹೈದರಾಬಾದ್, ಆ.14: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಮಹಾಭಾರತದ ಕೃಷ್ಣ ಮತ್ತು ಅರ್ಜುನಗೆ ಹೋಲಿಸಿರುವ ಸಿನೆಮ ನಟ ರಜನೀಕಾಂತ್ ಹೇಳಿಕೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾಗಿದ್ದರೆ ಈ ಪರಿಸ್ಥಿತಿಯಲ್ಲಿ ಪಾಂಡವರು ಮತ್ತು ಕೌರವರು ಯಾರು ? ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಈದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡಿನ ನಟರೊಬ್ಬರು 370ನೇ ವಿಧಿಯನ್ನು ರದ್ದುಗೊಳಿಸಿರುವುದಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ್ದಾರೆ. ದೇಶದಲ್ಲಿ ಮತ್ತೊಂದು ಮಹಾಭಾರತ ನಡೆಯಬೇಕೆಂದು ನೀವು (ರಜನೀಕಾಂತ್) ಇಚ್ಛಿಸುತ್ತೀರಾ. ಹಾಗಿದ್ದರೆ ಇಲ್ಲಿ ಪಾಂಡವರು ಮತ್ತು ಕೌರವರು ಯಾರು ? ಎಂದು ಪ್ರಶ್ನಿಸಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರ ಮೂರನೇ ಐತಿಹಾಸಿಕ ಪ್ರಮಾದ ಎಸಗಿದೆ. 1953ರಲ್ಲಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದ್ದು ಮತ್ತು 1987ರಲ್ಲಿ ಅಕ್ರಮವಾಗಿ ಚುನಾವಣೆ ನಡೆಸಿದ್ದು ಈ ಹಿಂದಿನ ಐತಿಹಾಸಿಕ ಪ್ರಮಾದಗಳಾಗಿದ್ದವು . ಜವಾಹರಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲರಲ್ಲಿದ್ದ ರಾಜಕೀಯ ಮುತ್ಸದ್ದಿತನ ಮತ್ತು ಜಾಣ್ಮೆ ಪ್ರಧಾನಿ ಮೋದಿಯಲ್ಲಿಲ್ಲ. ಈ ಸರಕಾರಕ್ಕೆ ಕಾಶ್ಮೀರಿಗಳ ಬಗ್ಗೆ ಯಾವುದೇ ಪ್ರೀತಿಯಿಲ್ಲ. ಅವರಿಗೆ ಕಾಶ್ಮೀರದ ಭೂಮಿ ಬೇಕು, ಅಲ್ಲಿನ ಜನರಲ್ಲ. ಅವರಿಗೆ ಅಧಿಕಾರದ ಮೇಲೆ ಪ್ರೀತಿಯಿದೆ ನ್ಯಾಯದ ಮೇಲಲ್ಲ. ಅಧಿಕಾರ ಉಳಿಸಿಕೊಳ್ಳುವುದೇ ಅವರ ಅಪೇಕ್ಷೆಯಾಗಿದೆ. ಆದರೆ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅವರಿಗೆ ನೆನಪಿಸಲು ಬಯಸುತ್ತೇನೆ ಎಂದು ಉವೈಸಿ ಹೇಳಿದ್ದಾರೆ. ರಜನೀಕಾಂತ್ ಹೇಳಿಕೆಯನ್ನು ಆಕ್ಷೇಪಿಸಿರುವ ಕಾಂಗ್ರೆಸ್‌ನ ತಮಿಳುನಾಡು ರಾಜ್ಯಾಧ್ಯಕ್ಷ ಕೆಎಸ್ ಅಳಗಿರಿ, ಕೋಟ್ಯಾಂತರ ಜನರ ಹಕ್ಕನ್ನು ಕಿತ್ತುಕೊಂಡವರು ಕೃಷ್ಣ ಮತ್ತು ಅರ್ಜುನ ಹೇಗಾಗುತ್ತಾರೆ ? ರಜನೀಕಾಂತ್, ದಯವಿಟ್ಟು ಮಹಾಭಾರತವನ್ನು ಮತ್ತೊಮ್ಮೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News