ಬರ್ದ್ವಾನ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಇಂದೋರ್‌ನಲ್ಲಿ ಬಂಧನ

Update: 2019-08-14 18:25 GMT

ಭೋಪಾಲ್, ಆ. 14: ಬರ್ದ್ವಾನ್‌ನ ಖಗ್ರಾಗಢ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದೋರ್‌ನ ಆಝಾದ್ ನಗರ ಪ್ರದೇಶದಿಂದ ಬುಧವಾರ ಬಂಧಿಸಿದೆ. ಬಂಧಿತ ಆರೋಪಿಯನ್ನು ಜಾಹಿರ್ ಉಲ್ ಶೇಖ್ ಎಂದು ಗುರುತಿಸಲಾಗಿದೆ. ತಂಡದ ಪ್ರಮುಖ ಸದಸ್ಯನಾಗಿದ್ದ ಈತ ಪಶ್ಚಿಮಬಂಗಾಳದ ಬರ್ದ್ವಾನ್ ಜಿಲ್ಲೆಯ ಖಗ್ರಾಗಢದ ಬಾಡಿಗೆ ಮನೆಯೊಂದರಲ್ಲಿ ಬಾಂಬ್ ಸಿದ್ಧಪಡಿಸುತ್ತಿದ್ದ. 2014 ಅಕ್ಟೋಬರ್ 2ರಂದು ಸಿದ್ಧಪಡಿಸುತ್ತಿದ್ದ ಬಾಂಬ್ ಸ್ಫೋಟಗೊಂಡು ಆತನ ಇಬ್ಬರು ಸಹವರ್ತಿಗಳು ಮೃತಪಟ್ಟಿದ್ದರು. ಎನ್‌ಐಎ ಬರ್ದ್ವಾನದಲ್ಲಿ ಶೇಖ್‌ನ ಮನೆಯಿಂದ 41 ಜಿಲೆಟಿನ್ ಕಡ್ಡಿಗಳನ್ನು ಪತ್ತೆ ಮಾಡಿತ್ತು. ಆತ ಸ್ಫೋಟದ ನಂತರ ಪರಾರಿಯಾಗಿದ್ದ. ಬಾಂಗ್ಲಾದೇಶದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್‌ನ ಸಕ್ರಿಯ ಸದಸ್ಯನಾಗಿರುವ ಶೇಖ್‌ನನ್ನು ಖಂಡ್ವಾ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಗಿದೆ. ಆತನನ್ನು ಹೆಸರು ಬಹಿರಂಗಪಡಿಸದ ಸ್ಥಳವೊಂದಕ್ಕೆ ಕರೆದೊಯ್ಯಲಾಗಿದೆ ಎಂದು ಎಸ್‌ಎಸ್‌ಪಿ ರುಚಿ ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News