ಭೂಕಕ್ಷೆ ದಾಟಿ ಚಂದ್ರನ ಪಥದತ್ತ ಹೊರಟ ಚಂದ್ರಯಾನ-2 ನೌಕೆ

Update: 2019-08-14 18:27 GMT

ಹೊಸದಿಲ್ಲಿ, ಆ.14: ಚಂದ್ರನೆಡೆಗೆ ಪ್ರಯಾಣ ಬೆಳೆಸಿರುವ ಭಾರತದ ಚಂದ್ರಯಾನ-2 ನೌಕೆಯ ಅಂತಿಮ ಹಂತದ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಬುಧವಾರ ಯಶಸ್ವಿಯಾಗಿ ನಡೆದಿದೆ. ಇದೀಗ ಭೂಕಕ್ಷೆಯನ್ನು ದಾಟಿರುವ ಚಂದ್ರಯಾನ-2 ನೌಕೆ ಚಂದ್ರನ ಪಥದತ್ತ ಸಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ. ಬೆಂಗಳೂರಿನಲ್ಲಿರುವ ಇಸ್ರೋದ ನಿಯಂತ್ರಣ ಕಚೇರಿಯಿಂದ ಬುಧವಾರ ಬೆಳಿಗ್ಗೆ 2.21 ಗಂಟೆಗೆ ಭೂಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಈ ಹಿಂದೆ ಜುಲೈ 23ರಿಂದ ಆಗಸ್ಟ್ 6ರವರೆಗೆ ಐದು ಹಂತದಲ್ಲಿ ಚಂದ್ರಯಾನ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋದ ಪ್ರಕಟಣೆ ತಿಳಿಸಿದೆ. ಚಂದ್ರಯಾನ -2 ನೌಕೆ ನಿಗದಿಯಾಗಿರುವಂತೆ ಆಗಸ್ಟ್ 20ರಂದು ಚಂದ್ರನನ್ನು ಸಮೀಪಿಸಲಿದ್ದು ಗಗನನೌಕೆಯ ದ್ರವ ಇಂಜಿನನ್ನು ಉರಿಸುವ ಮೂಲಕ ನೌಕೆಯನ್ನು ಚಂದ್ರನ ಪಥದಲ್ಲಿ ಸೇರಿಸಲಾಗುವುದು. ಬಳಿಕ ನಾಲ್ಕು ಬಾರಿ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆಸಿ ಅಂತಿಮವಾಗಿ ಚಂದ್ರನ ಮೇಲ್ಮೈಗೆ ಸುಮಾರು 100 ಕಿ.ಮೀ ದೂರದಲ್ಲಿ ಸಾಗುವ ಕಕ್ಷೆಗೆ ಸೇರಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News