'ಜಿಲ್ಲಾಡಳಿತವೇ ನಿಮ್ಮೊಂದಿಗಿದೆ' ನೆರೆ ಸಂತ್ರಸ್ತರಿಗೆ ದ.ಕ. ಜಿಲ್ಲಾಧಿಕಾರಿ ಭರವಸೆ

Update: 2019-08-15 10:59 GMT

ಮಂಗಳೂರು, ಆ.15: ತಮ್ಮೆಲ್ಲವನ್ನೂ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಂಯಮದಿಂದ ಸಹಕರಿಸಿರುವ ನಿಮ್ಮ ಜತೆ ಇಡೀ ಜಿಲ್ಲಾಡಳಿತವೇ ಇದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಭರವಸೆ ನುಡಿಗಳನ್ನಾಡಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಧಾರಾಕಾರವಾಗಿ ಸುರಿವ ಮಳೆಯ ನಡುವೆ ಜಿಲ್ಲಾ ಮಟ್ಟದ ಸ್ವಾತಂತ್ರ ದಿನಾಚರಣೆ ಅಂಗವಾಗಿ ಕೊಡೆ ಹಿಡಿದುಕೊಂಡೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಬಳಿಕ ಪೆಂಡಾಲ್‌ನಡಿ ನಿಂತು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ನೂರು ವರ್ಷಗಳಲ್ಲಿ ಕಂಡರಿಯದ ನೆರೆ ಪ್ರವಾಹ ಉಂಟಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿ ಜನಸಾಮಾನ್ಯರ ಬದುಕು ಬೀದಿ ಪಾಲಾಗಿ ಸಂಕಷ್ಟದಲ್ಲಿದ್ದಾರೆ. ಅವರ ಬಾಳಲ್ಲಿ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಾರ್ವಜನಿಕರು ಸಹಾಯ ಹಸ್ತದ ನೆರವು ನೀಡಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಈ ಸಂದರ್ಭ ಮನವಿ ಮಾಡಿದರು.

ಜಿಲ್ಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಅನೇಕ ಕಡೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹಾನಿಗೊಂಡ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರವಾಹ ಪರಿಹಾರ ಕಾಮಗಾರಿ ಗಳನ್ನು ಕೈಗೊಳ್ಳಲು ಸರಕಾರದಿಂದ ಜಿಲ್ಲೆಗೆ ಈ ಸಾಲಿನಲ್ಲಿ ಒಟ್ಟು 48.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಡಿ 918 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ವಾತಂತ್ರ ಸಂಭ್ರಮದ ಜತೆಗೆ ದೇಶದ ಪ್ರಗತಿ, ಏಳಿಗೆ ಹಾಗೂ ಐಕ್ಯತೆಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸಲು ದೃಢ ಸಂಕಲ್ಪವನ್ನು ಭಾರತೀಯರಾದ ನಾವು ಮಾಡಬೇಕಿದೆ. ಜಾತಿ, ಮತ ಭೇದಗಳನ್ನು ಮರೆತು ಸರ್ವ ಧರ್ಮಗಳನ್ನು ಪ್ರೀತಿಸುವ ಮೂಲಕ ನಾವೆಲ್ಲಾ ಭಾರತೀಯರು ಎಂಬ ಒಂದೇ ಮನೋಭಾವದಿಂದ ದೇಶವನ್ನು ಪ್ರಬಲ ರಾಷ್ಟ್ರವನ್ನಾಗಿ ಮುನ್ನಡೆಸಲು ಬದ್ಧರಾಗಬೇಕು ಎಂದವರು ಹೇಳಿದರು.

ಒಂದು ಪೀಳಿಗೆ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತು. ಈಗ ನಾವೆಲ್ಲ ಭಾರತವನ್ನು ವಿಶ್ವತ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸೋಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಾಂತಿಯಿಂದ ಬಾಳು ಕಟ್ಟಿಕೊಳ್ಳಲು ಶ್ರಮಿಸೋಣ ಎಂದು ಅವರು ಹೇಳಿದರು.

ಅತ್ಯುತ್ತಮವಾಗಿ ಪಥ ಸಂಚಲನ ನಡೆಸಿದ ಎನ್‌ಸಿಸಿ ಏರ್‌ವಿಂಗ್ ಸೀನಿಯರ್ ತಂಡ ಪ್ರಥಮ ಸ್ಥಾನ ಪಡೆದರೆ, ಎನ್‌ಸಿಸಿ ನೇವ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಇದೇ ವೇಳೆ ಜಿಲ್ಲಾ ಮಟ್ಟದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಪುತ್ತೂರು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಎನ್ (616 ಅಂಕಗಳು), ಸುಳ್ಯ ಎಣ್ಮೂರಿನ ಸರಕಾರಿ ಪ್ರೌಢಶಾಲೆಯ ಮಹಮ್ಮದ್ ಮಜೀದ್ (613), ಗುರುವಾಯನೆಕೆರೆ ಸರಕಾರಿ ಪ್ರೌಢಶಾಲೆಯ ತೇಜಸ್ವಿ ಕೆ. ಅವರಿಗೆ ಲ್ಯಾಪ್‌ಟಾಪ್ ನೀಡಿ ಅಭಿನಂದಿಸಲಾಯಿತು.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅತ್ಯಧಿಕ ಅಂಕ ಗಳಿಸಿದ ಮುಲ್ಕಿ ಸ.ಪ.ಪೂ. ಕಾಲೇಜಿನ ಸಂತೋಷ್, ಕಾವೂರು ಸ.ಪ.ಪೂ. ಕಾಲೇಜಿನ ಪುಷ್ಪ ಪುಣ್ಯ, ಬಲ್ಮಠ ಸ.ಮಹಿಳಾ ಪ.ಪೂ. ಕಾಲೇಜಿನ ಬಸವ್ವ ರುದ್ರಪ್ಪ ಚಲವಾಯಿ, ಮಂಗಳೂರು ದಕ್ಷಿಣದಲ್ಲಿ ಅತ್ಯಧಿಕ ಅಂಕ ಗಳಿಸಿದ ಮುಚ್ಚೂರು ಸರಕಾರಿ ಪ್ರೌಢಶಾಲೆಯ ರಕ್ಷಿತಾ, ಕುಂಪಲ ಆರ್‌ಎಂಎಸ್‌ಎ ಸರಕಾರಿ ಪ್ರೌಢಶಾಲೆಯ ಲಿಖಿತ್ ಕುಮಾರ್, ಹರೇಕಳ ನ್ಯೂಪಡ್ಪು ಸರಕಾರಿ ಸಂಯುಕ್ತ ಪ್ರೌಢಶಾಲೆಯ ರಹೀನ್ ತೌಶಿಯಾ ಅವರಿಗೂ ಲ್ಯಾಪ್‌ಟಾಪ್ ನೀಡಿ ಅಭಿನಂದಿಸಲಾಯಿತು.

ವಿಂಗ್ ಕಮಾಂಡರ್ ಮಳೆಯಲ್ಲಿ ತೊಯ್ದುಕೊಂಡೇ ಗೌರವ ಸಲ್ಲಿಸಿದರು. ಪೊಲೀಸ್ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ, ವಿದ್ಯಾರ್ಥಿಗಳಿಂದ ನಾಡಗೀತೆ, ರೈತಗೀತೆ ನಡೆಯಿತು.

ಇದೇ ಮೊದಲ ಬಾರಿ ಕರಾವಳಿ ಕಾವಲು ಪೊಲೀಸ್ ಪಡೆ ಸೇರಿದಂತೆ ಒಟ್ಟು 18 ತಂಡಗಳು ಹಾಗೂ ಎರಡು ವಾದ್ಯ ತಂಡಗಳು ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿದವು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News