ಭಾರೀ ಭೂಕುಸಿತದಲ್ಲಿ ಮೃತಪಟ್ಟ 59 ಮಂದಿಯ ಮರಣೋತ್ತರ ಪರೀಕ್ಷೆಗೆ ಸ್ಥಳ ನೀಡಿದ ಮಸೀದಿ

Update: 2019-08-15 09:11 GMT
Photo: indianexpress

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಕಾವಲಪರ ಎಂಬಲ್ಲಿ ಕಳೆದ ವಾರ ಸಂಭವಿಸಿದ ಗುಡ್ಡ ಕುಸಿತದಲ್ಲಿ ಒಂದು ಗ್ರಾಮವೇ ನೆಲಸಮಗೊಂಡಿತ್ತು. ಈ ಭಾರೀ ಭೂಕುಸಿತದಲ್ಲಿ ಜೀವಂತ ಸಮಾಧಿಯಾದ 59 ಮಂದಿಯ ಮೃತದೇಹಗಳು ಕಳೆದ ಶುಕ್ರವಾರದಿಂದೀಚೆಗೆ ಒಂದೊಂದಾಗಿ ದೊರೆಯುತ್ತಲೇ ಇವೆ. ಮರಣೋತ್ತರ ಪರೀಕ್ಷೆಗಳು ಹತ್ತಿರದಲ್ಲಿಯೇ ಇರುವ ಮಸೀದಿಯ ಕಟ್ಟಡದಲ್ಲಿ ನಡೆಯುತ್ತಿದೆ. ಪೊತ್ತುಕಲ್ ಎಂಬಲ್ಲಿನ ಮಸ್ಜಿದ್ ಅಲ್-ಮುಜಾಹಿದ್ದೀನ್ ಮಸೀದಿ ತನ್ನ ಬಾಗಿಲುಗಳನ್ನು ಈ ದುರಂತದಲ್ಲಿ ಸಾವಿನ ಮನೆಗೆ ತೆರಳಿದ ಹಿಂದುಗಳು, ಮುಸ್ಲಿಮರು ಹಾಗೂ ಕ್ರೈಸ್ತರು ಹೀಗೆ ಎಲ್ಲಾ ಧರ್ಮಗಳವರಿಗೂ ತೆರೆದಿದೆ. ಮಹಿಳೆಯರು ನಮಾಝ್ ಗಾಗಿ ಬಳಸುತ್ತಿದ್ದ ಸ್ಥಳವನ್ನು ಮಸೀದಿ ಸಮಿತಿ ಭೂಕುಸಿತದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಲು ಅನುಕೂಲವಾಗಲು ಬಿಟ್ಟು ಕೊಟ್ಟಿದೆ.

ಆ ಕಟ್ಟಡದಲ್ಲಿರುವ ಹಲವು ಮೇಜುಗಳನ್ನು ಜತೆಯಾಗಿ ಸೇರಿಸಿ ಮರಣೋತ್ತರ ಪರೀಕ್ಷೆ ನಡೆಸುವ ಮೇಜುಗಳನ್ನಾಗಿ ಪರಿವರ್ತಿಸಲಾಗಿದೆ. ಕಳೆದ ಶನಿವಾರದಿಂದ ಭೂಕುಸಿತದಲ್ಲಿ ಮೃತಪಟ್ಟವರ ಅಂತಿಮ ಪಯಣ, ಅವರ ಧರ್ಮದ ಎಲ್ಲೆಯನ್ನು ಮೀರಿ ಈ ಮಸೀದಿಯ ಕಂಪೌಂಡಿನಿಂದಲೇ ಆರಂಭಗೊಂಡಿದೆ.

ಭೂಕುಸಿತ ಸಂಭವಿಸಿದ ಸ್ಥಳದಿಂದ ಅತ್ಯಂತ ಹತ್ತಿರದ ಸರಕಾರಿ ಆಸ್ಪತ್ರೆಯಿರುವುದು 25 ಕಿಮೀ ದೂರದ ನೀಲಾಂಬುರ್ ನಲ್ಲಿ. ಹೀಗಿರುವಾಗ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಲ್ಲಿ ಕಳೇಬರಗಳನ್ನು ಅಷ್ಟು ದೂರ ಸಾಗಿಸುವುದು ಕಷ್ಟಕರವೆಂದು ತಿಳಿದು ಮಸೀದಿ ಸಮಿತಿಯನ್ನು ಸಂಪರ್ಕಿಸಿದಾಗ ಅವರು ಪೂರ್ಣ ಮನಸ್ಸಿನಿಂದ ಒಪ್ಪಿದರು'' ಎಂದು ಪೊತ್ತುಕಲ್ ಪಂಚಾಯತ್ ಸದಸ್ಯ ಸುಲೈಮಾನ್ ಹಾಜಿ ಹೇಳುತ್ತಾರೆ.

ಕೆಸರು ಮಣ್ಣಿನಡಿಯಲ್ಲಿ ಹೂತ ಕಳೇಬರಗಳನ್ನು ಮರಣೋತ್ತರ ಪರೀಕ್ಷೆಗೆ ಮುಂಚಿತವಾಗಿ ತೊಳೆಯಲೂ ಅವಕಾಶ ಮಾಡಿಕೊಟ್ಟಿರುವುದಾಗಿ ಮಸೀದಿ ಸಮಿತಿ ಕಾರ್ಯದರ್ಶಿ ಕರೀಂ ಕಾವನಸೇರಿ ಹೇಳುತ್ತಾರೆ.

ಸೋಮವಾರ ಮುಸ್ಲಿಮರು ಈದ್ ಆಚರಿಸುತ್ತಿದ್ದ ವೇಳೆಯೂ ಮಸೀದಿಯ ಈ ಕಟ್ಟಡದಲ್ಲಿ ಮರಣೋತ್ತರ ಪರೀಕ್ಷೆಗಳು ನಡೆಯುತ್ತಿದ್ದವು. "ಯಾರೂ ಆಕ್ಷೇಪಿಸಿಲ್ಲ, ಇಂತಹ ದುಃಖಕರ ಸನ್ನಿವೇಶದಲ್ಲಿ ನಾವು ಬೇರೇನನ್ನೂ ಯೋಚಿಸಲು ಸಾಧ್ಯವಿಲ್ಲ'' ಎಂದು ಕರೀಂ ಹೇಳಿದರು. ಈ ಮಸೀದಿಯನ್ನು ಕೇರಳ ನದ್ವತುಲ್ ಮುಜಾಹಿದ್ದೀನ್ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News