ಮಂಗಳೂರು: ರಾಷ್ಟ್ರಗೀತೆ ಹಾಡುವಾಗ ಜಡಿಮಳೆ; ಅತಿಥಿಗಳು ಓಟಕ್ಕಿತ್ತರೂ, ಸ್ಥಳದಿಂದ ಕದಲದ ವಿದ್ಯಾರ್ಥಿಗಳು

Update: 2019-08-15 12:59 GMT

ಕೊಣಾಜೆ, ಆ. 15 : ದ್ವಜಾರೋಹಣ ನಡೆಸಲು ಸಿದ್ದವಾಗುತ್ತಿರುವಾಗಲೇ ಮೋಡಕವಿದ ವಾತಾವರಣವಿದ್ದು, ಯಾವಾಗ ಅತಿಥಿಗಳು ದ್ವಜಾರೋಹಣ ನಡೆಸಿ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ಆರಂಭಿಸಿದರೋ ಅದೇ ವೇಳೆ ಜಡಿಮಳೆ ಆರಂಣಭಗೊಂಡಿತು. ಆ ವೇಳೆ ಅತಿಥಿಗಳು ಓಟಕ್ಕಿತ್ತರೆ, ಶಾಲಾ ಮಕ್ಕಳು ಮಾತ್ರ ಮಳೆಯನ್ನೂ ಲೆಕ್ಕಿಸದೆ ರಾಷ್ಟ್ರಗೀತೆ ಪೂರ್ಣಗೊಳಿಸಿ ರಾಷ್ಟ್ರಪ್ರೇಮ ಮೆರೆದಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಮುಡಿಪು ಸಾಂಬಾರ್‍ತೋಟ ಎಂಬಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ಆಚರಣೆಗಾಗಿ ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಅತಿಥಿಗಳು, ಸ್ಥಳೀಯ ಸಾರ್ವಜನಿಕರು ಸರಿಯಾದ ಸಮಯಕ್ಕೆ ಹಾಜರಿದ್ದರು. ಆದರೆ ಮುಖ್ಯ ಅತಿಥಿ ದ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ಆರಂಭಿಸಿದಾಗ ಗಾಳಿ ಮಳೆ ಆರಂಭವಾಯಿತು. ಈ ವೇಳೆ ಮುಖ್ಯ ಅತಿಥಿಗಳು ಹಾಗೂ ಸಾರ್ವಜನಿಕರು ಅಲ್ಲಿಂದ ಓಟಕ್ಕಿತ್ತು ಶಾಲೆಯೊಳಗೆ ಓಡಿ ಬಂದರೂ, ರಾಷ್ಟ್ರಗೀತೆ ಹಾಡುತ್ತಿದ್ದ ವಿದ್ಯಾರ್ಥಿಗಳು ಮಾತ್ರ ಗಾಳಿ ಮಳೆಯನ್ನು ಲೆಕ್ಕಿಸದೆ ರಾಷ್ಟ್ರಗೀತೆಯನ್ನು ಪೂರ್ಣಗೊಳಿಸಿಯೇ ಅಲ್ಲಿಂದ ತೆರಳಿದರು. ಮಕ್ಕಳೊಂದಿಗೆ ಶಾಲೆಯ ಶಿಕ್ಷಕರೂ ಸಾಥ್ ನೀಡಿದರು.

ವೀಡಿಯೊ ವೈರಲ್ 

ಮಳೆಯ ನಡುವೆಯೂ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿದ ವೀಡಿಯೊವನ್ನು ಅಲ್ಲಿದ್ದ ಸ್ಥಳೀಯರೊಬ್ಬರು ತೆಗೆದಿದ್ದರು. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಳೆ ಬಂದರೂ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸದೆ ರಾಷ್ಟ್ರಪ್ರೇಮ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News