ಮಂಗಳೂರು ಪುರಭವನದಲ್ಲಿ ಸ್ವಾತಂತ್ರೋತ್ಸವ ಆಚರಣೆ

Update: 2019-08-15 14:57 GMT

ಮಂಗಳೂರು, ಆ.15: ದ.ಕ. ಜಿಲ್ಲಾಡಳಿತ, ದ.ಕ. ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ. ವಸಂತಕುಮಾರ್ ಪೆರ್ಲ ಏಕತೆಯ ಭಾವ ಮೈಗೂಡಿಸಿಕೊಳ್ಳುವುದರೊಂದಿಗೆ ರಾಷ್ಟ್ರ ಪ್ರೇಮ ಬೆಳೆಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಸಾಗಲು ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದರು.

ಯಾವುದೇ ಜನಾಂದೋಲನದ ಹಿಂದೆ ಸಾಹಿತ್ಯದ ಪರಿಶ್ರಮವಿರುತ್ತದೆ. ಸಾಹಿತ್ಯವು ಜನರನ್ನು ಸಕಾರಾತ್ಮಕ ಚಳುವಳಿಗೆ ಎಳೆಯುತ್ತದೆ. ರಾಷ್ಟ್ರಪ್ರೇಮ ಮತ್ತು ಸ್ವಾತಂತ್ರ್ಯ ಆಂದೋಲನವು ನವೋದಯ ಸಾಹಿತ್ಯದ ಹಿಂದಿರುವ ಎರಡು ಪ್ರಬಲ ಶಕ್ತಿಗಳಾಗಿವೆ ಎಂದು ಪೆರ್ಲ ಅಭಿಪ್ರಾಯಪಟ್ಟರು.

ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಆರ್‌ಪಿ ಅಧಿಕಾರಿ ಬಾಬು, ಡಿಎಆರ್ ಅಧಿಕಾರಿ ಗಣೇಶ್, ಮುಖ್ಯ ಶಿಕ್ಷಕಿಯರಾದ ಅರುಣಾಕುಮಾರಿ, ಲಲನಾ ಶೆಣೈ, ಡಾ.ವಸಂತಕುಮಾರ್ ಪೆರ್ಲ ಅವರನ್ನು ಗೌರವಿಸಲಾಯಿತು.

ಡಿಡಿಪಿಐ ವೈ. ಶಿವರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ (ಪ್ರಭಾರ) ರಾಜೇಶ್ ಜಿ., ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಕಾಲೇಜು ಶಿಕ್ಷಣ ಇಲಾಖೆಯ ಶ್ರೀಧರ್ ಮಣಿಯಾಣಿ, ಕಸಾಪ ಮಂಗಳೂರು ತಾಲೂಕು ಅಧ್ಯಕ್ಷೆ ವಿಜಯಕುಮಾರಿ ಬಿ. ಶೆಟ್ಟಿ, ಕಸಾಪ ಸದಸ್ಯರಾದ ಪೂರ್ಣಿಮಾ ರಾವ್ ಪೇಜಾವರ, ಜನಾರ್ದನ ಹಂದೆ ಮತ್ತಿತರರು ಉಪಸ್ಥಿತರಿದ್ದರು.

ಕಸಾಪ ಸದಸ್ಯ ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News