ಜನಸಂಖ್ಯಾ ನಿಯಂತ್ರಣ, ಒಂದು ರಾಷ್ಟ್ರ ಒಂದು ಚುನಾವಣೆಗೆ ಪ್ರಧಾನಿ ಮೋದಿ ಕರೆ

Update: 2019-08-15 15:33 GMT

ಹೊಸದಿಲ್ಲಿ, ಆ.15: 73ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ದಿಲ್ಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ಘೋಷಣೆ, ಜನಸಂಖ್ಯಾ ಸ್ಫೋಟದ ಮೇಲೆ ನಿಯಂತ್ರಣ ಹಾಗೂ ಒಂದು ದೇಶ ಒಂದು ಚುನಾವಣೆ ಹಾಗೂ ಇತರ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಸೇನಾಪಡೆಗೆ ತರಲಾಗಿರುವ ಪ್ರಮುಖ ಸುಧಾರಣೆಯಲ್ಲಿ ಪ್ರಧಾನಿ ಮೋದಿ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ರಚಿಸುವುದಾಗಿ ಘೋಷಿಸಿದ್ದು ಇದರಿಂದ ಮೂರೂ ಸೇನಾ ವಿಭಾಗಗಳಲ್ಲಿ ಹೊಂದಾಣಿಕೆ ಹೆಚ್ಚಾಗಲಿದೆ ಮತ್ತು ಈ ಮೂರು ವಿಭಾಗಗಳಿಗೆ ಪರಿಣಾಮಕಾರಿ ನಾಯಕತ್ವ ಒದಗಿಸಲಿದೆ ಎಂದು ಅಭಿಪ್ರಾಯಿಸಿದ್ದಾರೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿರುವ ಕುರಿತು ಮಾತನಾಡಿದ ಪ್ರಧಾನಿ, ಕಣಿವೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಳೆದ 70 ವರ್ಷಗಳಲ್ಲಿ ಅಪೇಕ್ಷಿತ ಫಲ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಭವಿಷ್ಯದಲ್ಲಿ ಜಮ್ಮು ಕಾಶ್ಮೀರವನ್ನು ಅಭಿವೃದ್ಧಿಗೊಳಿಸಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ. 95 ನಿಮಿಷಗಳ ತನ್ನ ಸ್ವಾತಂತ್ರ್ಯ ಭಾಷಣದಲ್ಲಿ ಮೋದಿ ತನ್ನ ಅಧಿಕಾರದ ಎರಡನೇ ಅವಧಿಯಲ್ಲಿ ಜನರ ನಿರೀಕ್ಷೆಗಳು ಮತ್ತು ಕನಸುಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ದೇಶಾದ್ಯಂತ ಪ್ರತಿ ಮನೆಗೂ ನಳ್ಳಿ ಮೂಲಕ ಕುಡಿಯುವ ನೀರು ಪೂರೈಸುವ 3.5 ಲಕ್ಷ ಕೋಟಿ ರೂ. ವೆಚ್ಚದ ಜಲ ಜೀವನ ಯೋಜನೆಯನ್ನು ಇದೇ ವೇಳೆ ಮೋದಿ ಘೋಷಿಸುವ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು:

► ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಒಂದು ರಾಷ್ಟ್ರ ಒಂದು ಸಂವಿಧಾನದತ್ತ ಭಾರತವಿಟ್ಟ ಪ್ರಮುಖ ಹೆಜ್ಜೆಯಾಗಿದೆ.

► ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯಿಂದ ರಕ್ಷಣಾ ಪಡೆಗಳ ಮಧ್ಯೆ ಹೊಂದಾಣಿಕೆ ಹೆಚ್ಚಳ ಮತ್ತು ಪರಿಣಾಮಕಾರಿ ನಾಯಕತ್ವಕ್ಕೆ ನಾಂದಿ.

► ಸಂಪತ್ತು ಸೃಷ್ಟಿಸುವವರನ್ನು ಗೌರವಿಸಬೇಕು. ಸಂಪತ್ತು ಸೃಷ್ಟಿಯಾದಾಗ ಮಾತ್ರ ಅದನ್ನು ಹಂಚಲು ಸಾಧ್ಯವಾಗುತ್ತದೆ.

► ಕಳೆದ ಐದು ವರ್ಷಗಳಲ್ಲಿ ನಮ್ಮ ಸರಕಾರ ಜನರ ಅಗತ್ಯಗಳನ್ನು ಪೂರೈಸಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಜನರ ನಿರೀಕ್ಷೆಗಳು ಮತ್ತು ಕನಸುಗಳನ್ನು ಸಾಕಾರಗೊಳಿಸಲಿದ್ದೇವೆ.

► ಜಲ ಜೀವನ ಯೋಜನೆಯ ಮೂಲಕ 3.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಪ್ರತಿ ಮನೆಗೂ ನಳ್ಳಿ ಮೂಲಕ ಕುಡಿಯುವ ನೀರು ಪೂರೈಕೆ.

ಗ್ರಾಮೀಣ ಭಾರತ, ರೈತರು, ಹಿಂದುಳಿದ ವರ್ಗ, ದಲಿತರು ಮತ್ತು ಬುಡಕಟ್ಟು ಜನರನ್ನು ಗುರಿಯಾಗಿಸಿ ಜನರ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News