ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ: ಶಾಸಕ ರಾಜೇಶ್ ನಾಯ್ಕ್

Update: 2019-08-15 16:29 GMT

ಬಂಟ್ವಾಳ, ಆ. 15: ನಾವಿಂದು ಸ್ವಾಂತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಹೇಳಿದ್ದಾರೆ.

ಅವರು ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ಸಂವಿಧಾನದ ಚೌಕಟ್ಟಿಗೆ ಒಳಪಟ್ಟು ಆಡಳಿತ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಬಂಟ್ವಾಳದ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಬೇಕು. ಪ್ರತಿಯೊಬ್ಬರೂ ಸ್ವಚ್ಛತೆಗೆ ಹೆಚ್ಚಿನ ಗಮನಕೊಡಿ ಎಂದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಬೇರೆ ಬೇರೆ ಚಳವಳಿಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರ ನೆನಪು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಮಂಗಳೂರಿನ ರಥಬೀದಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ನಾಗವೇಣಿ ಮಂಚಿ ವಿಶೇಷ ಉಪನ್ಯಾಸ ನೀಡಿ, ಮೌಲ್ಯಯುತವಾದ ಉಚಿತ ಕಡ್ಡಾಯ ಶಿಕ್ಷಣ ಸಿಕ್ಕಾಗ ಅಲ್ಲಿ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಪ್ರಜ್ಞಾವಂತರ ನಾಡು ಅದಾಗುತ್ತದೆ ಎಂದರು. ನೈತಿಕವಾಗಿ ಜೀವನ ಮೌಲ್ಯ ಗಳನ್ನು ಕಲಿತುಕೊಂಡು ಆತ್ಮ ಶಕ್ತಿಯ ಮೂಲಕ ಬದುಕಲು ಕಲಿಯಬೇಕು ಅಲ್ಲಿ ಸ್ವಾತಂತ್ರ್ಯ, ಪ್ರೀತಿ ವಿಶ್ವಾಸ ಇರಲು ಸಾಧ್ಯ. ದೇಶದ ಜೊತೆ ಬದುಕನ್ನು ಪ್ರೀತಿಸುವ ಪರಿಸರ ನಿರ್ಮಾಣ ಮಾಡೋಣ ಎಂದರು.

ಮಿನಿ ವಿಧಾನಸೌಧ ಮುಂಭಾಗ ಧ್ವಜಾರೋಹಣ ಮಾಡಿ ಗೌರವರಕ್ಷೆ ಸ್ವೀಕರಿಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಸ್ವಚ್ಛ ಭಾರತವಾಗಬೇಕಾದರೆ ನಾವು ಸ್ವಚ್ಛ ಬಂಟ್ವಾಳ ಆಭಿಯಾನ ನಡೆಸಬೇಕಾಗಿದೆ. ಬಂಟ್ವಾಳ ಬಂಗಾರದ ಪೇಟೆ ಎಂಬ ಹೆಸರಿಗೆ ತಕ್ಕಂತೆ ಇಲ್ಲಿನ ಜನರು ಚಿನ್ನದಂತಹವರು. ಅದಕ್ಕೆ ಸಾಕ್ಷಿ ನೆರೆಯ ಸಂದರ್ಭ ಮರೆತು ಒಟ್ಟಾಗಿ ಕೆಲಸ ಮಾಡಿರುವುದು ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಿಇಒ ಜ್ಞಾನೇಶ್ ಉಪಸ್ಥಿತರಿದ್ದರು.

ಆಕರ್ಷಕ ಪಥಸಂಚಲನ

ಧ್ವಜಾರೋಹಣಕ್ಕೆ ಮೊದಲು ಪೊಲೀಸ್, ಗೃಹರಕ್ಷಕ ದಳ, ಎನ್‍ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಗೈಡ್ಸ್, ಕಬ್-ಬುಲ್ ಬುಲ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ತುಕುಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ಪುರಸಭಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ, ಪ್ರೌಡ ಶಾಲಾ ವಿದ್ಯಾರ್ಥಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯಕ್ರಮಗಳು ನಡೆದವು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿದರು. ಬಂಟ್ವಾಳ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಸುರೇಶ್ ಬಿ. ನೇತೃತ್ವದಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಗಿಡವಿತರಣೆ, ಶಿಕ್ಷಣ ಇಲಾಖೆಯ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ನಡೆಯಿತು. ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಜ್ಞಾನೇಶ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News