ಸ್ವಾತಂತ್ರ್ಯ ರಕ್ಷಿಸಲು ನಾವು ಅನ್ಯಾಯ, ಅಸಹಿಷ್ಣುತೆ ವಿರುದ್ಧ ಎದ್ದು ನಿಲ್ಲಬೇಕು: ಸೋನಿಯಾ ಗಾಂಧಿ

Update: 2019-08-15 16:52 GMT

ಹೊಸದಿಲ್ಲಿ, ಆ. 15: ಸ್ವಾತಂತ್ರ ರಕ್ಷಿಸಲು ಅಸಹಿಷ್ಣುತೆ, ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ದೇಶ ಎದ್ದು ನಿಲ್ಲಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಕರೆ ನೀಡಿದ್ದಾರೆ. ಪ್ರಜಾಸತ್ತಾತ್ಮಕ ಹಾಗೂ ಸ್ಥಿತಿಸ್ಥಾಪಕತ್ವದ ಗುಣ ಹೊಂದಿರುವ 73ನೇ ಹರೆಯದಲ್ಲಿರುವ ಭಾರತದಲ್ಲಿ ಧರ್ಮಾಂದತೆ, ಮೂಢನಂಬಿಕೆ, ಪಂಥೀಯತೆ, ಮತಾಂಧತೆ, ಜನಾಂಗೀಯತೆ, ಅಸಹಿಷ್ಣುತೆ, ಅನ್ಯಾಯಕ್ಕೆ ಸ್ಥಾನವಿಲ್ಲ. ಆದರೆ, ಲಕ್ಷಾಂತರ ನಾಗರಿಕರು ಪ್ರತಿದಿನ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ದೇಶದ 73ನೇ ಸ್ವಾತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಸೋನಿಯಾ ಗಾಂಧಿ ಆರೋಹಣಗೈದರು. ಈ ಸಂದರ್ಭ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕಪಿಲ್ ಸಿಬಲ್, ಬಿ.ಎಸ್. ಹೂಡಾ, ಅಹ್ಮದ್ ಪಟೇಲ್, ಮನಮೋಹನ್ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು. ನಮ್ಮ ದೇಶ ಎಲ್ಲ ರಂಗಗಳಲ್ಲಿಯೂ ಮುಂದಿದೆ. ಇದಕ್ಕೆ ಕಾರಣ ದೇಶದ ತಿರುಳಿನಲ್ಲಿರುವ ಸ್ಥಾಪಕ ತತ್ವಗಳಾದ ಸತ್ಯ, ಅಹಿಂಸೆ, ಸಹಾನುಭೂತಿ ಹಾಗೂ ಅಚಲ ದೇಶಭಕ್ತಿ ಎಂದು ಸೋನಿಯಾ ಗಾಂಧಿ ಸ್ವಾತಂತ್ರ ದಿನಚಾರಣೆಯ ಸಂದೇಶದಲ್ಲಿ ಹೇಳಿದರು.

‘‘ಸ್ವಾತಂತ್ರ, ಸಹೋದರತ್ವ, ಶಾಂತಿ ಹಾಗೂ ಸಮಾನತೆಯ ಮೌಲ್ಯಗಳನ್ನು ಕಾಪಾಡುವ ಹಾಗೂ ರಕ್ಷಿಸುವ ಗಂಭೀರ ಕರ್ತವ್ಯವನ್ನು ಪ್ರತಿಯೊಬ್ಬ ನಾಗರಿಕನೂ ಪಾಲಿಸಬೇಕು. ದೇಶದ ಸಮಗ್ರತೆ ರಕ್ಷಿಸುವಲ್ಲಿ ನಮ್ಮ ಶಶಸ್ತ್ರ ಸೇನಾ ಪಡೆಯ ಅತ್ಯುಚ್ಚ ಬಲಿದಾನವನ್ನು ನಾವು ಮರೆಯಲೇ ಬಾರದು’’ ಎಂದು ಅವರು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ರೈತರು, ಕಾರ್ಮಿಕರು, ಕುಶಲಕರ್ಮಿಗಳು, ವಿಜ್ಞಾನಿಗಳು, ವ್ಯಾಪಾರಿಗಳು, ಅಧ್ಯಾಪಕರು, ಕಲಾವಿದರು, ಲೇಖಕರು ಹಾಗೂ ಚಿಂತಕರಿಗೆ ಸೋನಿಯಾ ಗಾಂಧಿ ಗೌರವ ಸಲ್ಲಿಸಿದರು.

ನಮ್ಮ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕತೆಯ ಅಳಿಸಲಾಗದ ಲಕ್ಷಣಗಳಾಗಿ ಸಹಾನುಭೂತಿ, ಸಹ ಅಸ್ತಿತ್ವ, ಒಳಗೊಳ್ಳುವ ಅಭಿವೃದ್ಧಿ ತತ್ವಗಳನ್ನು ಪುನರುಜ್ಜೀವನಗೊಳಿಸುವಂತೆ ನಾನು ಎಲ್ಲರಲ್ಲಿ ಮನವಿ ಮಾಡುತ್ತೇನೆ.

ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News