ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿ ಇಲ್ಲ: ಭೇಟಿ ನೀಡಿದ ಹೋರಾಟಗಾರರ ತಂಡದ ಅಭಿಪ್ರಾಯ

Update: 2019-08-15 16:56 GMT

ಹೊಸದಿಲ್ಲಿ, ಅ. 15: ನಿರ್ಜನ ಬೀದಿ, ಕಳೆಗುಂದಿದ ಮುಖಗಳು, ಅನಿಶ್ಚಿತತೆ - ಇವು ಜಮ್ಮು ಹಾಗೂ ಕಾಶ್ಮೀರಕ್ಕೆ ಐದು ದಿನಗಳ ಭೇಟಿ ನೀಡಿದ ಬಳಿಕ ಸಾಮಾಜಿಕ ಹೋರಾಟಗಾರರ ಗುಂಪು ಹೊತ್ತು ತಂದ ಕೆಲವು ಭಾವ ಬಿಂಬಗಳು. ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ಖ್ಯಾತ ಆರ್ಥಿಕ ತಜ್ಞ ಜೀನ್ ಡ್ರೆಜ್ ಹಾಗೂ ಹೋರಾಟಗಾರರಾದ ಮೈಮೂನಾ, ಕವಿತಾ ಕೃಷ್ಣನ್ ಹಾಗೂ ವಿಮಲ್ ಭಾ ಆಗಸ್ಟ್ 9ರಿಂದ 13ರ ವರೆಗೆ ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರವಾಸ ನಡೆಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿರುವ ವರದಿ ಬಿಡುಗಡೆ ಮಾಡಿದ ಅವರು, ಕಾಶ್ಮೀರದ ಬಗೆಗಿನ ಚಿತ್ರಣ ನಿಜವಾಗಿ ಅಲ್ಲಿನ ಪರಿಸ್ಥಿತಿಗಿಂತ ಭಿನ್ನವಾಗಿದೆ ಎಂದಿದ್ದಾರೆ. ಕಣಿವೆಯ ನಗರ ಹಾಗೂ ಇತರ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಸ್ಥಳೀಯವಾಗಿ ಅಹಿತರ ಘಟನೆಗಳು ಸಂಭವಿಸಿವೆ. ಆದರೆ, ಇವುಗಳನ್ನು ನಿಯಂತ್ರಿಸಲಾಗಿದೆ ಹಾಗೂ ಸ್ಥಳೀಯವಾಗಿ ಪರಿಹರಿಸಲಾಗಿದೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ನ ಹೆಚ್ಚುವರಿ ಪ್ರಧಾನ ನಿರ್ದೇಶಕ ಮುನೀರ್ ಖಾನ್ ಶ್ರೀನಗರದಲ್ಲಿ ಹೇಳಿದ್ದಾರೆ ಎಂದು ತಂಡ ತಿಳಿಸಿದೆ. ‘‘ಕಾಶ್ಮೀರದ ನಿವಾಸಿಗಳು ಅಕ್ಷರಶಃ ತಮ್ಮ ಮನೆಯಲ್ಲಿ ಬಂಧಿಯಾಗಿದ್ದಾರೆ. ಅವರ ಎಲ್ಲ ಸಂವಹನ ಜಾಲಗಳನ್ನು ಸ್ಥಗಿತಗೊಳಿಸಲಾಗಿದೆ. ಬೀದಿಗಳು ನಿರ್ಜನವಾಗಿವೆ’’ ಎಂದು ನ್ಯಾಶನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್‌ನ ವಿಮಲ್ ಆರೋಪಿಸಿದ್ದಾರೆ. ನಮ್ಮ ತಂಡ ಶ್ರೀನಗರದ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿತ್ತು. ಅಲ್ಲಿ ಇಬ್ಬರು ಬಾಲಕರು ಪೆಲೆಟ್ ಗುಂಡಿನಿಂದ ಗಾಯಗೊಂಡು ದಾಖಲಾಗಿದ್ದರು ಎಂದು ಅವರು ಹೇಳಿದ್ದಾರೆ. ‘‘ಜನರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಅದನ್ನು ಒಂದೋ ನಿಯಂತ್ರಿಸಲಾಗಿದೆ ಅಥವಾ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ’’ ಎಂದು ಡ್ರೆಜ್ ಹೇಳಿದ್ದಾರೆ. ‘‘ಜನರನ್ನು ಗಮನಿಸಲು ಸೇನೆ ಹಾಗೂ ಅರೆ ಸೇನಾ ಪಡೆಯ ದೊಡ್ಡ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರ ಗಮನ ನಿರಂತರ ಅವರ ಮೇಲಿದೆ. ಜನರಿಗೆ ಗುಂಪಾಗಿ ಹೋಗಲು ಸಾಧ್ಯವಿಲ್ಲ’’ ಎಂದು ಅವರು ತಿಳಿಸಿದ್ದಾರೆ.

ನಿರ್ಧಾರ ತೆಗೆದುಕೊಳ್ಳುವಾಗ ತಮ್ಮೊಂದಿಗೆ ಸಮಾಲೋಚನೆ ನಡೆಸದಿರುವ ಬಗ್ಗೆ ಜಮ್ಮು ಹಾಗೂ ಕಾಶ್ಮೀರದ ಜನರು ಅಸಮಾಧಾನಗೊಂಡಿದ್ದಾರೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ವುಮನ್ಸ್ ಅಸೋಸಿಯೇಶನ್‌ನ ಮೈಮೂನಾ ಹೇಳಿದ್ದಾರೆ. ತಮ್ಮೊಂದಿಗೆ ಸಮಾಲೋಚನೆ ನಡೆಸದೆ ತಮ್ಮ ತಾಯ್ನಾಡನ್ನು ಎರಡು ಅಥವಾ ಮೂರು ಆಗಿ ವಿಭಜಿಸಿದರೆ ಬಿಹಾರ ಅಥವಾ ತಮಿಳುನಾಡಿನ ಜನರು ಆಕ್ರೋಶಗೊಳ್ಳಲಾರರೇ ? ಎಂದು ಕವಿತಾ ಕೃಷ್ಣನ್ ಪ್ರಶ್ನಿಸಿದ್ದಾರೆ. ತಂಡ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿದಾಗ ಪುಟ್ಟ ವೀಡಿಯೊ ಮಾಡಿದ್ದರು. ಅದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಬೇಕಿತ್ತು. ಆದರೆ, ಪ್ರೆಸ್ ಕ್ಲಬ್ ಅವಕಾಶ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News