ಬಿಪಿನ್ ರಾವತ್ ದೇಶದ ಮೊಟ್ಟಮೊದಲ ಸಿಡಿಎಸ್?

Update: 2019-08-16 03:46 GMT

ಹೊಸದಿಲ್ಲಿ, ಆ.16: ಭಾರತದ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಸೇರಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್)ರ ನೇಮಕದ ಪರಿಕಲ್ಪನೆ ಹುಟ್ಟಿಕೊಂಡು ಇಪ್ಪತ್ತು ವರ್ಷಗಳ ಬಳಿಕ ಅದು ಕಾರ್ಯರೂಪಕ್ಕೆ ಬರುವ ಸ್ಪಷ್ಟ ಸೂಚನೆ ಸಿಕ್ಕಿದ್ದು, ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ದೇಶದ ಮೊಟ್ಟಮೊದಲ ಸಿಡಿಎಸ್ ಆಗುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಸೇನೆಗೆ ಸಂಬಂಧಿಸಿದ ಎಲ್ಲ ಸಲಹೆಗಳು ಒಂದೆಡೆಯಿಂದ ಬರುವ ಸಲುವಾಗಿ ಮತ್ತು ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಸಮಗ್ರ ಸೇನಾ ಯೋಜನೆ, ಖರೀದಿ, ತರಬೇತಿ, ಲಾಜಿಸ್ಟಿಕ್ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಇದು ಮಹತ್ವದ ನಿರ್ಧಾರವಾಗಲಿದೆ. 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಿಡಿಎಸ್ ಅಗತ್ಯತೆ ಕಾಣಿಸಿಕೊಂಡಿತ್ತು.

ಭಾರತೀಯ ಸೇನಾಪಡೆಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಿಡಿಎಸ್ ನೇಮಕದ ನಿರ್ಧಾರವನ್ನು ಪ್ರಕಟಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದರು. ಆ ಬಳಿಕ ಯಾರು ಮೊಟ್ಟಮೊದಲ ಸಿಡಿಎಸ್ ಆಗಬಹುದು ಎಂಬ ಬಗ್ಗೆ ಊಹಾಪೋಹಗಳು ಮಿಲಿಟರಿ ವಲಯದಲ್ಲಿ ಹುಟ್ಟಿಕೊಂಡಿದ್ದು, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಅಭಿಪ್ರಾಯ ಬಹುತೇಕ ಕೇಳಿಬರುತ್ತಿದೆ.

ಉನ್ನತ ಮಟ್ಟದ ಅನುಷ್ಠಾನ ಸಮಿತಿ, ಸಿಡಿಎಸ್ ಪಾತ್ರವನ್ನು ನವೆಂಬರ್ ಒಳಗಾಗಿ ಅಂತಿಮಪಡಿಸಲಿದೆ. ವಾಯುಪಡೆದ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದು, ರಾವತ್ ಅಧಿಕಾರಾವಧಿ ಡಿಸೆಂಬರ್ 31ರವರೆಗೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News