ಉಪ್ಪಿನಂಗಡಿ: ಜ್ಯುವೆಲ್ಲರಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2019-08-16 04:43 GMT

ಉಪ್ಪಿನಂಗಡಿ, ಆ.16: ಪೇಟೆಯಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

 ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಮೀಪವೇ ಇರುವ  ಆರ್.ಕೆ. ಜುವೆಲ್ಲರ್ಸ್‌ ನಿಂದ ಈ ಕಳ್ಳತನ ನಡೆದಿದೆ. ಇಂದು ಮುಂಜಾನೆ 3ರಿಂದ 3:30ರ ಸುಮಾರಿಗೆ ಈ ದರೋಡೆ ನಡೆದಿದೆ.

ಚಿನ್ನದ ಅಂಗಡಿಯ ಶೆಟರ್ ನ ಬೀಗವನ್ನು ಗ್ಯಾಸ್ ಕಟರ್ ಮೂಲಕ ತುಂಡು ಮಾಡಲಾಗಿದೆ. ಬಳಿಕ ಒಳನುಗ್ಗಿರುವ ಕಳ್ಳರು ಅಂದಾಜು ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಜ್ಯುವೆಲ್ಲರಿಯ ಸಿಸಿಟಿವಿ ಕ್ಯಾಮರಾ ಸಂಪರ್ಕವನ್ನು ಕಡಿತಗೊಳಿಸಿರುವ ಕಳ್ಳರು, ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಹೊತ್ತೊಯ್ದಿದ್ದಾರೆ. ಅದಲ್ಲದೆ ಅಂಗಡಿಯ ಶೆಟರ್ ಮುರಿಯಲು ಬಳಸಿದ ವೆಲ್ಡಿಂಗ್ ಗೆ ಬಳಸುವ ಒಂದು ಸಿಲಿಂಡರ್, ಎರಡು ಅನಿಲ ಸಿಲಿಂಡರ್, ಗ್ಯಾಸ್ ಕಟರ್ ಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಲಾಗಿದೆ.

ಉಪ್ಪಿನಂಗಡಿ ಪೇಟೆಯ ರಾತ್ರಿ ಕಾವಲುಗಾರ ಸಾಧಾರಣವಾಗಿ ಇದೇ ಜ್ಯುವೆಲ್ಲರಿ ಬಳಿ ಕುಳಿತಿರುತ್ತಿದ್ದರೆನ್ನಲಾಗಿದ್ದು, ನಿನ್ನೆ ಕೂಡಾ ಅಲ್ಲೆ ಇದ್ದ ಕಾವಲುಗಾರ, 3 ಗಂಟೆ ಸುಮಾರಿಗೆ ಪೇಟೆ ಸುತ್ತಾಡಲು ತೆರಳಿದ್ದ. ಆತ 3:30ರ ಸುಮಾರಿಗೆ ಜ್ಯುವೆಲ್ಲರಿ ಬಳಿ ಹಿಂದಿರುಗುವಷ್ಟರಲ್ಲಿ ಈ ದರೋಡೆ ನಡೆದಿದೆ ಎಂದು ತಿಳಿದುಬಂದಿದೆ.

ಕಳವಾಗಿರುವ ಒಟ್ಟು ಸೊತ್ತುಗಳ ನಿಖರ ಮೌಲ್ಯ ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಬೆರಳಚ್ಚುಗಾರರು, ಶ್ವಾನದಳವನ್ನು ಕರೆಸಲಾಗಿದೆ. ಈ ನಡುವೆ ಶ್ವಾನ ದಳವು ಸಮೀಪದ ಶಾಲೆ ಆವರಣದ ವರೆಗೆ ಕಳ್ಳರ ಜಾಡು ಹಿಡಿದು ಸಾಗಿದೆ. ಅಲ್ಲಿ ಜ್ಯುವೆಲ್ಲರಿಯ ಸಿಸಿಟಿವಿ ಕ್ಯಾಮರಾಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News