×
Ad

ಮದ್ಯದ ಗುಂಗಿನಲ್ಲಿ ಬಿಜೆಪಿ ಸಂಸದೆ ಪುತ್ರನ ಅವಾಂತರ

Update: 2019-08-16 09:33 IST

ಕೊಲ್ಕತ್ತಾ, ಆ.16: ಬಿಜೆಪಿ ಸಂಸದೆ ಹಾಗೂ ಬಂಗಾಲಿ ನಟಿ ರೂಪಾ ಗಂಗೂಲಿಯವರ ಪುತ್ರ ಆಕಾಶ್ ಮುಖೋಪಾಧ್ಯಾಯ (20) ಚಲಾಯಿಸುತ್ತಿದ್ದ ಬ್ಲ್ಯಾಕ್ ಸೆಡಾನ್ ಕಾರು ದಕ್ಷಿಣ ಕೊಲ್ಕತ್ತಾದ ಗಾಲ್ಫ್ ಗಾರ್ಡನ್ ಪ್ರದೇಶದಲ್ಲಿ ಕ್ಲಬ್ ಗೋಡೆಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಆಕಾಶ್ ಮದ್ಯದ ಗುಂಗಿನಲ್ಲಿ ಕಾರು ಚಲಾಯಿಸುತ್ತಿದ್ದುದು ಈ ಅವಘಡಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಶರವೇಗದಲ್ಲಿ ಯರ್ರಾಬಿರ್ರಿಯಾಗಿ ಸಾಗುತ್ತಿದ್ದ ಕಾರಿನ ದವಡೆಯಿಂದ ಹಲವು ಮಂದಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಪ್ರತಿಷ್ಠಿತ ಕ್ಲಬ್‌ನ ಅವರಣ ಗೋಡೆಗೆ ಕಾರು ಢಿಕ್ಕಿ ಹೊಡೆದು ಕಾಂಪೌಂಡ್ ಭಾಗಶಃ ಕುಸಿದಿದೆ. ಕಾರಿನ ಚಾಲಕ ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎನ್ನಲಾಗಿದೆ. ಕಾರು ಢಿಕ್ಕಿ ಹೊಡೆದಾಗ ಉಂಟಾದ ಗದ್ದಲ ಕೇಳಿ ಪಕ್ಕದ ಅಪಾರ್ಟ್‌ಮೆಂಟ್‌ನಿಂದ ಹೊರಬಂದ ಆಕಾಶ್ ತಂದೆ, ಮಗನನ್ನು ಒಳಕ್ಕೆ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಳಿಕ ಆಕಾಶ್‌ನನ್ನು ಜಾಧವಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಕಾನೂನು ತನ್ನದೇ ಕ್ರಮ ಕೈಗೊಳ್ಳಬೇಕು ಎಂದು ರೂಪಾ ಗಂಗೂಲಿ ಟ್ವೀಟ್ ಮಾಡಿದ್ದಾರೆ. "ನಾನು ಯಾವುದೇ ತಪ್ಪು ಮಾಡಿಲ್ಲ; ಅದನ್ನು ಸಹಿಸುವುದು ಕೂಡಾ ಇಲ್ಲ" ಎಂದು ಹೇಳಿರುವ ಟ್ವೀಟನ್ನು ಪ್ರಧಾನಿ ಮೋದಿಯವರಿಗೂ ಟ್ಯಾಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News