ಮಂಗಳೂರು: ‘ಮೈ ಬೀಟ್ ಮೈ ಪ್ರೈಡ್’ಗೆ ಚಾಲನೆ

Update: 2019-08-16 07:00 GMT

ಮಂಗಳೂರು, ಆ.16: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ 'ನಮ್ಮ ಕುಡ್ಲ ಪೊಲೀಸ್' ವಾಟ್ಸ್ ಆ್ಯಪ್ ಗ್ರೂಪ್ 'ಮೈ ಬೀಟ್ ಮೈ ಪ್ರೈಡ್' (ನಮ್ಮ ಬೀಟ್, ನಮ್ಮ ಹೆಮ್ಮೆ)ಗೆ ಶುಕ್ರವಾರ ಆಯುಕ್ತಾಲಯದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಚಾಲನೆ ನೀಡಿದರು.

ಬಳಿಕ‌ ಮಾತನಾಡಿದ ಅವರು, ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿರಬೇಕು, ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ತಂತ್ರಜ್ಞಾನ ಯುಗದಲ್ಲಿ ಸೋಶಿಯಲ್ ಮೀಡಿಯಾ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ 'ನಮ್ಮ ಕುಡ್ಲ ಪೊಲೀಸ್' ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಬೀಟ್ ಪೊಲೀಸ್ ವ್ಯವಸ್ಥೆ ಬಲಗೊಳಿಸಲಾಗಿದೆ ಎಂದರು.

ಪೊಲೀಸ್ ಆಯುಕ್ತರಿಂದ ಹಿಡಿದು ಎಸ್ಸೈವರೆಗಿನ ಅಧಿಕಾರಿಗಳು ತಿಂಗಳಿಗೊಮ್ಮೆ ಬೀಟ್ ಪೊಲೀಸರ ಜೊತೆ ಬೀಟ್ ಮಾಡಲಿದ್ದಾರೆ. ಆ ಮೂಲಕ ಜನರ ಬಳಿಗೆ ಪೊಲೀಸರು ತೆರಳಿ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು. 

ಇದಕ್ಕಾಗಿ ಹೊಸ ಆ್ಯಪ್ ರಚಿಸಲಾಗಿದ್ದು, ಜನಸ್ನೇಹಿ ಬೀಟ್ ಪೊಲೀಸ್ ಜೊತೆ ಕೈ ಜೋಡಿಸಲು ಆಸಕ್ತಿ ಇರುವವರು ಹೆಸರು ನೋಂದಾಯಿಸಿ ವ್ಯವಸ್ಥೆ ಬಲಪಡಿಸಲು ಕೈ ಜೋಡಿಸಬಹುದು ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನುಡಿದರು.

ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಅರುಣಾನಿಶ್ ಗಿರಿ, ನಿವೃತ್ತ ಡಿವೈಎಸ್ಪಿ ಟಿಸಿಎಂ ಶರೀಫ್, ಡಾ. ಉದಯ ಕುಮಾರ್, ರಾಜವರ್ಮ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ‌ ಕೋದಂಡರಾಮ ಸ್ವಾಗತಿಸಿದರು. ಇನ್ ಸ್ಪೆಕ್ಟರ್ ಗುರು ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಇಂದಿನಿಂದಲೇ ಆರಂಭ: ‘ಬಂದರು ಠಾಣಾ ವ್ಯಾಪ್ತಿಯ 7ನೆ ಬೀಟ್ ನಲ್ಲಿ ಶುಕ್ರವಾರ ಸಂಜೆ 4:30ಕ್ಕೆ ಕುದ್ರೋಳಿಯಲ್ಲಿ‌ ಬೀಟ್ ಪೊಲೀಸ್ ಜೊತೆ ನಡೆದಾಡಿ ಜನರ ಸಮಸ್ಯೆಗೆ ಸ್ಪಂದಿಸಲಿದ್ದೇನೆ' ಎಂದು ಹರ್ಷ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News