ಕುಂಡುಕೊಳಕೆ ಬೀಚ್ ಪರಿಸರದಿಂದ ಅಕ್ರಮ ಮರಳುಗಾರಿಕೆ

Update: 2019-08-16 08:52 GMT

ಮಂಜೇಶ್ವರ, ಆ.16: ಕುಂಡುಕೊಳಕೆ ಬೀಚ್ ಪರಿಸರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಸ್ಥಳೀಯರು ಇಂದು ಬೆಳಗ್ಗೆ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಮರಳು ಮಾಫಿಯಾ ಜಾಲವು ಮಾರಕಾಯುಧಗಳಿಂದ ಊರವರನ್ನು ಬೆದರಿಸಿತ್ತೆನ್ನಲಾಗಿದೆ. ಅಲ್ಲದೆ ತಡೆಹಿಡಿದ ಲಾರಿಗಳ ಪೈಕಿ 4ನ್ನು ಬಲವಂತಾಗಿ ಕೊಂಡೊಯ್ಯುವಲ್ಲಿ ಸಫಲವಾಗಿದೆ. ಉಳಿದ ಒಂದು ಲಾರಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ರಾತ್ರಿಯಿಡೀ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಿತ ಮಹಿಳೆಯರು ಸೇರಿದಂತೆ ಸ್ಥಳೀಯರೇ ಇಂದು ಮುಂಜಾನೆ ಮರಳು ಸಾಗಾಟದ ಟಿಪ್ಪರ್ ಗಳನ್ನು ತಡೆದಿದ್ದಾರೆ.

 ಈ ಸಂದರ್ಭ ಮರಳು ಮಾಫಿಯಾಗಳ ತಂಡ ಮಾರಕಾಯುಧಗಳಿಂದ ಊರವರನ್ನು ಆಕ್ರಮಿಸಲು ಮುಂದಾಗಿದೆ. ಮಾತ್ರವಲ್ಲ ಸ್ಥಳೀಯ ನಿವಾಸಿ ಜಿನೇವಾ ಎಂಬವರ ಮನೆಯವರ ಗೇಟನ್ನು ಮುರಿದು ಹಾಕಿ ಅವರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ನಂಬ್ರ ಪ್ಲೇಟ್ ಅಳವಡಿಸದ ಟಿಪ್ಪರ್ ಲಾರಿ ಹಾಗೂ ಪಿಕಪ್ ವಾಹನಗಳಲ್ಲಿ ಪ್ರತೀ ದಿನ ರಾತ್ರಿ ಸುಮಾರು 50 ಲೋಡ್ ಮರಳು ಸಾಗಾಟವಾಗುತ್ತಿರುವುದಾಗಿ ಊರವರು ಆರೋಪಿಸುತ್ತಿದ್ದಾರೆ.

ಒಂದು ಕಡೆ ಕಡಲ್ಕೊರೆತದಿಂದ ಹಲವಾರು ಮನೆಗಳು ಕಡಲು ಪಾಲಾಗುತ್ತಿದ್ದರೆ, ಇನ್ನೊಂದು ಕುಂಡುಕೊಳಕೆ ಬೀಚ್ ಪರಿಸರದಿಂದ ತೆಗೆದ ಮರಳಿನಿಂದಾಗಿ ಅಲ್ಲಲ್ಲಿ ಆಳವಾದ ಹೊಂಡ ಸೃಷ್ಟಿಯಾಗಿದೆ. ಕಾನೂನು ಪಾಲಕರು ಈ ಸಮಸ್ಯೆಯತ್ತ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News