‘ನಾನು ನಿಸ್ಸಹಾಯಕನಾಗಿದ್ದೇನೆ’: ಪ್ರವಾಹ ಪೀಡಿತರ ನೋವನ್ನು ಕಂಡು ಕಣ್ಣೀರಿಟ್ಟ ಶಾಸಕ

Update: 2019-08-16 10:24 GMT
Photo: english.mathrubhumi.com

ಕೊಚ್ಚಿ, ಆ.16: ಪ್ರವಾಹ ಪೀಡಿತ ಕೇರಳದ ಪೊತ್ತುಕಲ್ಲು ಎಂಬಲ್ಲಿ ಸಂತ್ರಸ್ತರ ಪರಿಹಾರ ಹಾಗೂ ಪುನರ್ವಸತಿ ಕುರಿತಂತೆ ಚರ್ಚಿಸಲು  ನಡೆದ ಸಭೆಯಲ್ಲಿ ಸ್ಥಳೀಯ ಶಾಸಕ ಪಿ ವಿ ಅನ್ವರ್ ಉಮ್ಮಳಿಸಿ ಬರುವ ದುಃಖ ತಡೆಯಲಾರದೆ ಅತ್ತ ಘಟನೆ ನಡೆದಿದೆ. ಜನಪ್ರತಿನಿಧಿಯಾಗಿರುವ ಹೊರತಾಗಿಯೂ ಇಂತಹ ನೈಸರ್ಗಿಕ ಪ್ರಕೋಪದ ಸಂದರ್ಭ ಅಸಹಾಯಕನಾಗಿದ್ದೇನೆ  ಎಂದು  ಭಾವುಕರಾಗಿ ಹೇಳಿದ್ದಾರೆ.

“ಸರಕಾರದಿಂದ ಧನಸಹಾಯಕ್ಕೆ ಕಾಯುವ ಬದಲು ನಾವು ಸಂತ್ರಸ್ತರಿಗೆ ಸಹಾಯಹಸ್ತ ಚಾಚಲು ಕೈಜೋಡಿಸಬೇಕು. ನಾವು ಇತರ ರಾಜ್ಯಗಳ ಹಾಗೂ ದೇಶಗಳ ಜನರಿಂದ ಸಹಾಯ ಕೇಳಬೇಕು. ಸರಾಸರಿ ಪ್ರತಿಯೊಬ್ಬ ಕೇರಳಿಗ ರೂ. 100  ನೀಡಿದರೆ ದೊಡ್ಡ ಸಹಾಯ ಮಾಡಿದಂತಾಗುವುದು. ನಮ್ಮ ಕ್ಷೇತ್ರದಲ್ಲಿ ಈ ಪ್ರಾಕೃತಿಕ ದುರಂತದಲ್ಲಿ ರೂ. 3,000 ಕೋಟಿಯಷ್ಟು ನಷ್ಟವಾಗಿದೆ,'' ಎಂದರು.

“ಕಳೆದ ಐದರಿಂದ ಎಂಟು ದಿನಗಳಿಂದ ಇಲ್ಲಿನ ಜನರ ಬವಣೆಗಳನ್ನು ಕಣ್ಣಾರೆ ನೋಡುತ್ತಿದ್ದೇನೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಕಣ್ಣೀರು ನೋಡಲು ಸಾಧ್ಯವಾಗುತ್ತಿಲ್ಲ. ತಮ್ಮ ಜೀವಮಾನದ ಎಲ್ಲಾ ಉಳಿತಾಯವನ್ನು ಒಂದೇ ರಾತ್ರಿಯಲ್ಲಿ ಕಳೆದ ಜನರನ್ನು ನೋಡಿದಾಗ ಒಬ್ಬ ಶಾಸಕನಾಗಿ  ನಾನು ನಿಸ್ಸಹಾಯಕನಾಗಿದ್ದೇನೆ, ಕೆಲವೊಮ್ಮೆ ಉಸಿರುಗಟ್ಟಿದಂತಾಗುತ್ತದೆ'' ಎನ್ನುತ್ತಾ ಕಣ್ಣೀರ ಕೋಡಿಯಾದರು ಅನ್ವರ್.

ಒಂದೆರಡು ನಿಮಿಷಗಳಲ್ಲಿ ಸಾವರಿಸಿಕೊಂಡ ಅವರು ನಮ್ಮಿಂದಾದಷ್ಟು ನಾವೆಲ್ಲ ಪ್ರಯತ್ನಿಸೋಣ, ವೈಯಕ್ತಿಕವಾಗಿ ರೂ 10 ಲಕ್ಷ ನೀಡುವುದಾಗಿಯೂ ತಿಳಿಸಿದರು.

ಆಡಳಿತ ಎಲ್‍ಡಿಎಫ್ ಬೆಂಬಲಿಗರಾಗಿರುವ ಪಕ್ಷೇತರ ಶಾಸಕರಾಗಿರುವ ಅನ್ವರ್ ಅವರು ನೀಲಾಂಬುರ್ ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು 50 ಜನರನ್ನು ಬಲಿ ಪಡೆದ ಭೂಕುಸಿತ ಸಂಭವಿಸಿದ ಕಾವಲಪ್ಪುರದಲ್ಲೂ ಅವರು ರಕ್ಷಣಾ ಕಾಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ನೀಲಾಂಬುರದಲ್ಲಿರುವ ಅವರ ಕಚೇರಿಯು ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ ಸಂಗ್ರಹಾ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಜನರ ಜತೆ ಸಂಪರ್ಕ ಸಾಧಿಸಿ ನೆರೆ ಸಂತ್ರಸ್ತರಿಗೆ ಅವರು ನೆರವಾಗುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News