ಉಡುಪಿ: ಸಹಕಾರ ಸಂಘಗಳ ಸಿಇಓಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Update: 2019-08-16 14:02 GMT

ಉಡುಪಿ, ಆ.16: ಗ್ರಾಮೀಣ ಪ್ರದೇಶಗಳಲ್ಲಿ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಸೌರಶಕ್ತಿ ಉಪಕರಣ ಖರೀದಿಗೆ ಸಾಲ ನೀಡಲು ಮುಂದಾಗಬೇಕಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಂಬಂಧಕ ಪ್ರವೀಣ್ ಬಿ.ನಾಯಕ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿ ಯನ್, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಕೃಷಿ ಪತ್ತಿನ /ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಉಡುಪಿ ಬಡಗಬೆಟ್ಟು ಸೊಸೈಟಿ ಯ ಜಗನ್ನಾಥ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಾಲ ವಸೂಲಾತಿ ಹಾಗೂ ನಿರ್ವಹಣೆ ಅತ್ಯಂತ ಕಷ್ಟದ ಕೆಲಸವಾಗಿದ್ದು, ಹೊಸ ಆದೇಶ ಹಾಗೂ ವಿವಿಧ ತೆರಿಗೆಗಳ ಮೂಲಕ ಸಹಕಾರಿ ಕ್ಷೇತ್ರದ ಮೇಲೆ ಒತ್ತಡ ಹಾಕುವ ಕಾರ್ಯ ನಡೆಯುತ್ತಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಹಕಾರಿ ಸಂಘಗಳ ಖಾತೆಗಳನ್ನು ಮುಚ್ಚುವಂತೆ ಆರ್‌ಬಿಐ ಸುತ್ತೋಲೆ ಹೊರಡಿಸಿದೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ಸಹಕಾರಿ ಸಂಸ್ಥೆಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಆಗ ಮಾತ್ರ ಜಯ ಸಾಧಿಸಲು ಸಾಧ್ಯವಾಗು ತ್ತದೆ ಎಂದು ಅವರು ತಿಳಿಸಿದರು.

ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯಕಾರ್ಯನಿರ್ವಣಾಧಿಕಾರಿ ಮನೋಹರ್ ಕಟ್ಕೇರಿ ‘ಸೌರಶಕ್ತಿ ಉಪಕರಣಗಳಿಗೆ ಸಾಲ ನೀಡುವಿಕೆ -ಹೊಸ ಅವಕಾಶಗಳು’ ಮತ್ತು ದ.ಕ. ಜಿಲ್ಲಾ ಕೇಂದ್ರದ ಸಹಕಾರಿ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ನಾಯರ್ ‘ಸಾಲ ವಸೂಲಾತಿ ಮತ್ತು ನಿರ್ವಹಣೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಭಾಗದ ಸಹಕಾರ ಸಂಘಗಳ ಸಹಾ ಯಕ ನಿಬಂಧಕಿ ಚಂದ್ರಪ್ರತಿಮಾ ಎಂ.ಜೆ., ಯೂನಿಯನ್ ನಿರ್ದೇಶಕರುಗಳಾದ ಕಟಪಾಡಿ ಶಂಕರ್ ಪೂಜಾರಿ, ಹರೀಶ್ ಕಿಣಿ, ಎಂ.ಗೋಪಿಕೃಷ್ಣ ರಾವ್ ಉಪಸ್ಥಿತರಿದ್ದರು. ಪ್ರಭಾರ ಸಿಇಓ ಪುರುಷೋತ್ತಮ್ ಎಸ್.ಪಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News