ವಕೀಲ ವೃತ್ತಿಯಲ್ಲೂ ಸಿಎಸ್‌ಆರ್ ಅಳವಡಿಕೆ ಅಗತ್ಯ: ಸಿ.ಎಂ.ಜೋಶಿ

Update: 2019-08-16 14:04 GMT

ಉಡುಪಿ, ಆ.16: ಕಂಪೆನಿಗಳು ನಿರ್ವಹಿಸುವ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್)ಯನ್ನು ವಕೀಲ ವೃತ್ತಿಯಲ್ಲೂ ಅಳವಡಿಸಿಕೊಂಡರೆ ಈ ದೇಶದ ಬಹುತೇಕ ಮಂದಿ ಉಚಿತ ಕಾನೂನು ನೆರವು ಪಡೆದುಕೊಳ್ಳಲು ಸಾಧ್ಯವಾಗು ತ್ತದೆ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸ ಲಾದ ಪ್ಯಾನಲ್ ವಕೀಲರಿಗೆ ಜಿಲ್ಲಾ ಮಟ್ಟದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.80ರಷ್ಟು ಮಂದಿಗೆ ಉಚಿತ ಕಾನೂನು ನೆರವು ಪಡೆದುಕೊಳ್ಳಲು ಅವಕಾಶ ಇದೆ. ಇದರಲ್ಲಿ ಶೇ.50ರಷ್ಟು ಮಹಿಳೆಯರು ಮತ್ತು ಶೇ.30ರಷ್ಟು ಮಕ್ಕಳು, ಖೈದಿಗಳು, ಹಿಂದುಳಿದವರ್ಗದವರು ಸೇರಿದ್ದಾರೆ. ಆದರೆ ಕಾನೂನು ನೆರವು ಪಡೆಯಲು ಬರುವವರ ಸಂಖ್ಯೆ ಮಾತ್ರ ಬಹಳ ಕಡಿಮೆ. ಯಾಕೆಂದರೆ ವಕೀಲ ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ನಾವು ತರಲೇ ಇಲ್ಲ ಎಂದು ತಿಳಿಸಿದರು.

ಕಂಪೆನಿಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವಂತೆ ಕಾನೂನು ರೂಪಿಸಲಾಗಿದೆ. ಆದರೆ ವೈಯುಕ್ತಿಕವಾಗಿ ನಮ್ಮ ನಮ್ಮ ವೃತ್ತಿಯಲ್ಲಿ ಸಮಾಜಕ್ಕೆ ಸೇವೆ ನೀಡಬೇಕೆಂಬುದರ ಬಗ್ಗೆ ನಾವು ಚಿಂತನೆ ಮಾಡಿಲ್ಲ. ಸಮಾಜದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿರುವುದರಿಂದ ತಮ್ಮ ಹಲವು ಕೇಸಗಳಲ್ಲಿ ಒಂದು ಕೇಸನ್ನಾದರೂ ಉಚಿತವಾಗಿ ನಿರ್ವಹಿಸುವ ಸಂಕಲ್ಪ ಮಾಡಬೇಕು. ಈ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ವಕೀಲ ಸಮುದಾಯ ಚಿಂತನೆ ಮಾಡಬೇಕಾಗಿದೆ. ವಕೀಲರು ತಮ್ಮ ಜ್ಞಾನವನ್ನು ಹೆಚ್ಚಿಸಿ ಕೊಂಡು ವೃತ್ತಿಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್.ಪಂಡಿತ್, ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ, ಜಿಲ್ಲಾ ಸರಕಾರಿ ವಕೀಲ ಶಶಿಧರ ಎರ್ಮಾಳ್, ಸಂಘದ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನ್ಯಾಯವಾದಿ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News