ದೇವಾಲಯದ ಅವಶೇಷಗಳ ಮೇಲೆ ಬಾಬರಿ ಮಸೀದಿ ನಿರ್ಮಿಸಲಾಗಿದೆ ಎಂದು ನಿರೂಪಿಸಲು ಸಾಕ್ಷಿಗಳನ್ನು ತನ್ನಿ

Update: 2019-08-16 17:37 GMT

ಹೊಸದಿಲ್ಲಿ, ಆ.16: ಪುರಾತನ ದೇವಸ್ಥಾನದ ಅವಶೇಷದ ಮೇಲೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಹೇಳಿಕೆಗೆ ಸೂಕ್ತವಾದ ಪುರಾವೆ ಒದಗಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಕಳೆದ ಎರಡು ಸಹಸ್ರ ವರ್ಷಗಳಲ್ಲಿ ನದಿಗಳ ದಡದಲ್ಲಿ ನಾಗರಿಕತೆ ನೆಲೆಗೊಳ್ಳುವುದನ್ನು ನಾವು ಕಂಡಿದ್ದೇವೆ. ಅವು ಈ ಹಿಂದಿನ ನಿರ್ಮಾಣದ ಮೇಲೆಯೇ ನೆಲೆಯಾಗುತ್ತಿದ್ದವು. ಆದರೆ, ಬಾಬರಿ ಮಸೀದಿಯನ್ನು ಪುರಾತನ ಹಿಂದು ದೇವಸ್ಥಾನದ ಅವಶೇಷದ ಮೇಲೆ ನಿರ್ಮಿಸಲಾಗಿದೆ ಎಂಬ ಹೇಳಿಕೆಗೆ ಪುರಾವೆ ಒದಗಿಸಿ ಎಂದು ಸಾಂವಿಧಾನಿಕ ನ್ಯಾಯಪೀಠದ ನ್ಯಾಯಾಧೀಶ ಡಿವೈ ಚಂದ್ರಚೂಡ್ , ರಾಮಲಲ್ಲ ವಿರಾಜ್‌ಮಾನ್ ಪರ ವಕೀಲ ಸಿಎಸ್ ವೈದ್ಯನಾಥನ್‌ಗೆ ಸೂಚಿಸಿದರು.

ವಿವಾದಿತ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಅಲ್ಲಿ ಭೂಮಿಯಡಿ ಪತ್ತೆಯಾದ ಕ್ರಿಸ್ತಪೂರ್ವ 2ನೇ ಶತಮಾನದ ಕಟ್ಟಡದ 14 ಕಂಬಗಳಲ್ಲಿ ಹಿಂದೂ ದೇವತೆಗಳ ರಚನೆಯಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಸೀದಿಯನ್ನು ಖಾಲಿ ಭೂಮಿಯಲ್ಲಿ ನಿರ್ಮಿಸಿಲ್ಲ, ದೇವಸ್ಥಾನದ ಅವಶೇಷದ ಮೇಲೆ ನಿರ್ಮಿಸಲಾಗಿದೆ ಎಂದು ವೈದ್ಯನಾಥನ್ ನ್ಯಾಯಪೀಠಕ್ಕೆ ತಿಳಿಸಿದರು.

  ಈ ಕಟ್ಟಡದ ಅವಶೇಷ ರಾಮನ ದೇಗುಲ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ಇಲ್ಲಿ ಹಿಂದೂ ದೇಗುಲವಿತ್ತು ಮತ್ತು ಅದು ರಾಮನ ದೇವಾಲಯ ಎಂಬ ನಂಬಿಕೆ ಹಿಂದೂಗಳದ್ದಾಗಿದೆ ಎಂದವರು ಹೇಳಿದರು. 1992ರಲ್ಲಿ ನೆಲಸಮಗೊಳ್ಳುವ ಮೊದಲಿನ ಬಾಬರಿ ಮಸೀದಿಯ ಕಟ್ಟಡದಲ್ಲಿ ಕಂಡು ಬಂದಿದ್ದ ವಿನ್ಯಾಸ, ಚಿತ್ರಗಳನ್ನು ವೈದ್ಯನಾಥನ್ ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ವಿನ್ಯಾಸ ಇಸ್ಲಾಂ ಧರ್ಮದ ವಿನ್ಯಾಸಕ್ಕೆ ವಿರುದ್ಧವಾಗಿದೆ. ಮುಸ್ಲಿಮರು ಬಾಬ್ರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಏಕಮಾತ್ರ ಕಾರಣಕ್ಕೆ ಅದರ ಒಡೆತನವನ್ನು ಅವರಿಗೆ ಬಿಟ್ಟುಕೊಡಲಾಗದು. ರಸ್ತೆಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರೆ ಆ ರಸ್ತೆ ಮಸೀದಿಯಾಗಿತ್ತು ಎಂದು ಹೇಳಲಾಗದು ಎಂದವರು ವಾದ ಮಂಡಿಸಿದರು.

ಆದರೆ ಉತ್ಖನನ ಸಂದರ್ಭದಲ್ಲಿ ದೊರಕಿದ ಪ್ರಾಣಿ, ಮಾನವನ ರಚನೆಗಳು ದೇವರೊಂದಿಗೆ ಹೇಗೆ ಸಂಬಂಧಿಸಿವೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ವೈದ್ಯನಾಥನ್, ಇವು ಪ್ರಾಣಿ ಅಥವಾ ಮನುಷ್ಯರ ಪ್ರತಿಮೆಗಳಲ್ಲ. ಇವುಗಳ ಬಗ್ಗೆ ಪುರಾತತ್ವ ತಜ್ಞರು ತಮ್ಮ ವ್ಯಾಖ್ಯಾನದಲ್ಲಿ ವಿವರಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News