‘ಇತಿಹಾಸ ನಿಂತ ನೀರಲ್ಲ; ನಿರಂತರ ಪರಿವರ್ತನೆಗೊಳ್ಳುವ ಜ್ಞಾನ ಶಾಖೆ’

Update: 2019-08-16 15:01 GMT

 ಉಡುಪಿ, ಆ.16: ‘ಇತಿಹಾಸ ನಿಂತ ನೀರಲ್ಲ. ಅದು ನಿರಂತರ ಪರಿವರ್ತನೆ ಗೊಳ್ಳುವ ಜ್ಞಾನದ ಶಾಖೆ. ಹೊಸ ಹೊಸ ಆಕರಗಳು ಸಿಕ್ಕಾಗಲೆಲ್ಲ ಅದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಆದುದರಿಂದ ಉಪನ್ಯಾಸಕರು ನಿರಂತರ ಓದಿನ ಮೂಲಕ ಈ ಬದಲಾವಣೆಗಳನ್ನು ಗಮನಿಸಿ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ.’ ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಇತಿಹಾಸ ಸಂಶೋಧನ ಮಾರ್ಗದರ್ಶಕ ಡಾ. ಬಿ. ಜಗದೀಶ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲೆ ಪದವಿ ಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕರ ವೇದಿಕೆ ಹಾಗೂ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಶುಕ್ರವಾರ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರಿಗೆ ಆಯೋಜಿಸಲಾದ ‘ಪುನಶ್ಚೇತನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇತಿಹಾಸ ಬೋಧನೆ ಮಾಡುವ ಅಧ್ಯಾಪಕರು ಪಠ್ಯವನ್ನು ಒಮ್ಮೆ ಓದಿಕೊಂಡ ಬಳಿಕ ಮತ್ತೆ ಮತ್ತೆ ಓದಿಕೊಳ್ಳಬೇಕಿಲ್ಲ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಇದು ಸರಿಯಲ್ಲ. ಇತಿಹಾಸ ಎಂದೂ ನಿಂತ ನೀರಲ್ಲ, ಇತಿಹಾಸ ಸಹ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂದರು.

ಉದಾಹರಣೆಗೆಸಿಂಧೂನದಿ ನಾಗರಿಕತೆ ಹರಪ್ಪಾ ಮತ್ತು ಮೊಹೆಂಜದಾರೊಗೆ ಸೀಮಿತ ಎಂದು ಇತಿಹಾಸ ಹೇಳುತ್ತದೆ. ಆದರೆ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆ ಹಾಗೂ ಉತ್ಕನನಗಳಿಂದ ಹರಪ್ಪಾ ಮತ್ತು ಮೊಹೆಂಜದಾರೊನಿಂದ ಪ್ರಾರಂಭಗೊಂಡ ಈ ನಾಗರಿಕತೆ ಇಂದು 1400ಕ್ಕೂ ಅಧಿಕ ಸ್ಥಳಗಳಿಗೆ ವಿಸ್ತರಣೆಗೊಂಡಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಈ ನಾಗರಿಕತೆ ಸಿಂಧೂ ನದಿ ವ್ಯಾಪ್ತಿಯನ್ನು ಮೀರಿ ಗುಜರಾತ್ ಹಾಗೂ ದಕ್ಷಿಣದ ಮಹಾರಾಷ್ಟ್ರಗಳಿಗೂ ವಿಸ್ತರಣೆಗೊಂಡಿರುವುದು ಗೊತ್ತಾಗಿದೆ ಎಂದು ಡಾ.ಶೆಟ್ಟಿ ತಿಳಿಸಿದರು.

ಅದೇ ರೀತಿ ಮಧ್ಯಕಾಲೀನ ಇತಿಹಾಸದಲ್ಲೂ ಇದು ಕಂಡುಬರುತ್ತದೆ. ವಿಜಯನಗರ ಸಾಮ್ರಾಜ್ಯದ ಕುರಿತು ಹೊಸ ಹೊಸ ಮಾಹಿತಿಗಳು ಬಾರಕೂರಿನಲ್ಲಿ ದೊರೆತ ಶಾಸನಗಳಿಂದ ದೊರಕಿವೆ. ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ದೊರೆತ ಅಳುಪರ ಕಾಲದ ತಾಮ್ರ ಶಾಸನ ಕನ್ನಡದ ಅತಿ ಪ್ರಾಚೀನ ತಾಮ್ರ ಶಾಸನವೆಂದು ಸಾಬೀತಾಗಿ ಹಿಂದಿನ ಇತಿಹಾಸ ಬದಲಾಯಿತು. ಹೀಗೆ ಹೊಸ ಹೊಸ ಆಕರಗಳು ದೊರೆತಾಗಲೆಲ್ಲಾ, ಮಾಹಿತಿ ಗಳು ಬೆಳಕಿಗೆ ಬಂದಾಗಲೆಲ್ಲಾ ಇತಿಹಾಸಕ್ಕೆ ಹೊಸ ವಿಷಯಗಳು ಸೇರ್ಪಡೆ ಗೊಳ್ಳುತ್ತಾ ಹೋಗುತ್ತವೆ ಎಂದರು.

ಆದುದರಿಂದ ಇತಿಹಾಸ ಅಧ್ಯಾಪಕರು ಇವುಗಳ ಕುರಿತು ಹೆಚ್ಚು ನಿಗಾ ವಹಿಸಬೇಕು. ಅಧ್ಯಯನಶೀಲರಾಗಬೇಕು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಆಸಕ್ತಿಕರ ರೀತಿಯಲ್ಲಿ ಮಾಹಿತಿಗಳನ್ನು ಹಂಚಿಕೊಂಡು ಅವರಲ್ಲೂ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿದರೆ ಇತಿಹಾಸ ಜ್ಞಾನ ಶಾಖೆ ಮುಂದುವರಿಯಲು ಸಾಧ್ಯ. ಇದರೊಂದಿಗೆ ಅವರು ಇತಿಹಾಸ ಆಕರಗಳ ಸಂರಕ್ಷಣೆಗೂ ಹೆಚ್ಚಿನ ಮುತುವರ್ಜಿ ವಹಿಸಬೆೀಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಮಾತನಾಡಿ,ಚರಿತ್ರೆಯನ್ನು ಮರೆತರೆ ಇತಿಹಾಸವನ್ನು ಮುಂದಿನ ದಿನಗಳಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ. ಇತಿಹಾಸ ಪ್ರಾಧ್ಯಾಪಕರು ಅಂತರ್ ಶಿಸ್ತೀಯ ಅಧ್ಯಯನಗಳಿಗೆ - ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲಾಪ್ರಕಾರ, ಇಂಜಿನಿಯರಿಂಗ್, ವೈದ್ಯಕೀಯ, ಸೈಕಾಲಜಿ ಮುಂತಾದ ವಿಷಯಗಳ ಇತಿಹಾಸ ಅಧ್ಯಯನ- ಹೆಚ್ಚಿನ ಆಸಕ್ತಿಯನ್ನು ತೆರಿಸಬೇಕಾದ ಅಗತ್ಯವಿದೆ ಎಂದರು.
 

ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಹನುಮ ನಾಯಕರ ಮಾರ್ಗದರ್ಶನದಲ್ಲಿ ‘ಹೊಯ್ಸಳರ ಕಾಲದಲ್ಲಿ ಕಂದಾಯ ಪದ್ಧತಿ’ ವಿಷಯದ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದ ಮಧುಾಜ್ ಅವರನ್ನು ಸನ್ಮಾನಿಸಲಾಯಿತು.

 ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಪ್ರೊ.ರಾಮದಾಸ್ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮರಿಯಾ ಜೆಸಿಂತಾ ಫುರ್ಟಾಡೊ ವಂದಿಸಿ, ಗ್ರೇಸಿ ಕೆ.ಜೆ. ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರ ವೇದಿಕೆಯ ಅ್ಯಕ್ಷಪ್ರೊ.ರಾಮದಾಸ್‌ಪ್ರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮರಿಯಾ ಜೆಸಿಂತಾ ಫುರ್ಟಾಡೊ ವಂದಿಸಿ, ಗ್ರೇಸಿ ಕೆ.ಜೆ. ಕಾರ್ಯಕ್ರಮ ನಿರೂಪಿಸಿದರು.

ಇತಿಹಾಸದಲ್ಲಿ 100ಕ್ಕೆ 100 ಅಂಕ

ಇದೇ ಸಂದರ್ಭದಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಚಿನ್ಮಯಿ ಪುರಾಣಿಕ್ ಇವರನ್ನು ವೇದಿಕೆ ವತಿಯಿಂದ ವಿಶೇಷವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಚಿನ್ಮಯಿ ಅವರು ಕಲಾವಿಭಾಗದಲ್ಲಿ ಒಟ್ಟು 564 ಅಂಕಗಳನ್ನು ಗಳಿಸುವ ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಆ.15ರಂದು ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಸನ್ಮಾನಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News