ರಸ್ತೆಯಲ್ಲಿ ನಮಾಝ್ ಮಾಡುವ ಮುಸ್ಲಿಮರು ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲ: ರಾಮ ಲಲ್ಲಾ ಪರ ವಕೀಲ

Update: 2019-08-16 15:32 GMT

ಹೊಸದಿಲ್ಲಿ, ಆ.16: ರಸ್ತೆಯ ಮೇಲೆ ನಮಾಝ್ ಮಾಡುತ್ತಾರೆ ಎಂದ ಮಾತ್ರಕ್ಕೆ ಮುಸ್ಲಿಮರು ಆ ರಸ್ತೆಗಳ ಮೇಲೂ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಪ್ರಾರ್ಥನೆ ನೆರವೇರಿಸಿದರು ಎಂದ ಮಾತ್ರಕ್ಕೆ ಅದರ ಮೇಲೆ ಮುಸ್ಲಿಮರು ಹಕ್ಕು ಸಾಧಿಸುವಂತಿಲ್ಲ ಎಂದು ರಾಮ ಲಲ್ಲಾ ವಿರಾಜ್ಮಾನ್ ಪರ ವಕೀಲ ಹಿರಿಯ ನ್ಯಾಯವಾದಿ ಸಿ.ಎಸ್ ವೈದ್ಯನಾಥನ್ ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬಾಬರಿ ಮಸೀದಿಯನ್ನು ನಿಜಾರ್ಥದಲ್ಲಿ ಒಂದು ಮಸೀದಿಯೆಂದು ಪರಿಗಣಿಸಲಾಗಿರಲಿಲ್ಲ. ಕಟ್ಟಡದ ಒಳಗಿರುವ ಕೆತ್ತನೆಗಳು, ಚಿತ್ರಕಲೆಗಳು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾಗಿವೆ. ಇಸ್ಲಾಂನ ಪ್ರಾರ್ಥನಾ ಸ್ಥಳಗಳಲ್ಲಿ ಮಾನವರ ಅಥವಾ ಪ್ರಾಣಿಗಳ ಚಿತ್ರಗಳು ಇರುವುದಿಲ್ಲ ಎಂದು ಅವರು ಭಾರತದ ಮುಖ್ಯ ನ್ಯಾಯಾಶೀಶ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯ ಪೀಠಕ್ಕೆ ತಿಳಿಸಿದ್ದಾರೆ.

ಇದೇ ವೇಳೆ, 1990ರಲ್ಲಿ ತೆಗೆಯಲಾದ ಕಟ್ಟಡದ ಚಿತ್ರಗಳನ್ನು ಅವರು ನ್ಯಾಯಪೀಠದ ಮುಂದಿಟ್ಟಿದ್ದಾರೆ. ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಪ್ರತಿದಿನ ನಡೆಸುತ್ತಿದ್ದು ಕಳೆದ ಕೆಲವು ದಿನಗಳಿಂದ ವೈದ್ಯನಾಥನ್ ಅವರು ಬಾಬರಿ ಮಸೀದಿಯನ್ನು ರಾಮ ಮಂದಿರದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಮತ್ತು ಈ ಜಮೀನು ಯಾರಿಗೂ ಸೇರಿಲ್ಲ ಎಂದು ಹೇಳುವುದು ತಪ್ಪು ಎಂದು ವಾದಿಸುತ್ತಿದ್ದಾರೆ.

ಕಟ್ಟಡವನ್ನು ಮಂದಿರದ ಅವಶೇಷಗಳ ಮೇಲೆ ನಿರ್ಮಿಸಲಾಗಿದ್ದರೆ ಅದು ಮಸೀದಿಯಾಗಲೂ ಸಾಧ್ಯವಿಲ್ಲ. ಯಾಕೆಂದರೆ ಇದು ಶರಿಯತ್ ಕಾನೂನಿಗೆ ವಿರುದ್ಧವಾಗಿದೆ. ಅಯೋಧ್ಯೆಯಲ್ಲಿ ಮಂದಿರ ನಾಶದ ಎರಡು ಸಾಧ್ಯತೆಗಳನ್ನು ಹೇಳಲಾಗಿದೆ. ಒಂದು ಮೊಘಲ್ ದೊರೆ ಬಾಬರ್ ಅದನ್ನು ಧ್ವಂಸಗೊಳಿಸಿದ ಎಂದು ಮತ್ತೊಂದು ಔರಂಗಜೇಬ್ ಈ ಮಂದಿರವನ್ನು ಕೆಡವಿದ ಎಂದು ಹೇಳಲಾಗಿದೆ. ಆದರೆ ಎರಡೂ ಸಾಧ್ಯತೆಗಳಲ್ಲೂ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಿರುವುದು ಸಾಬೀತಾಗುತ್ತದೆ ಎಂದು ವೈದ್ಯನಾಥನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News