ಅಮೆರಿಕದ ಮುಸ್ಲಿಮ್ ಸಂಸದೆಯರ ಭೇಟಿ ರದ್ದುಪಡಿಸಿದ ಇಸ್ರೇಲ್

Update: 2019-08-16 17:01 GMT

ಜೆರುಸಲೇಮ್, ಆ. 16: ಅಮೆರಿಕದ ಇಬ್ಬರು ಮುಸ್ಲಿಮ್ ಸಂಸದೆಯರ ಯೋಜಿತ ಇಸ್ರೇಲ್ ಭೇಟಿಯನ್ನು ನಿಷೇಧಿಸುವುದಾಗಿ ಇಸ್ರೇಲ್ ಗುರುವಾರ ಹೇಳಿದೆ.

ಇಸ್ರೇಲ್, ಫೆಲೆಸ್ತೀನಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ಆ ದೇಶವನ್ನು ಬಹಿಷ್ಕರಿಸಬೇಕೆನ್ನುವ ಕರೆಗೆ ಈ ಇಬ್ಬರು ಸಂಸದೆಯರು ಬೆಂಬಲ ವ್ಯಕ್ತಪಡಿಸಿದ್ದರು.

ಇಸ್ರೇಲ್‌ನ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಬಲ ಬೆಂಬಲ ವ್ಯಕ್ತಪಡಿಸಿದ್ದಾರೆ.

ಫೆಲೆಸ್ತೀನ್ ಮೂಲದ ಅಮೆರಿಕದ ಸಂಸದೆಯರಾದ ಇಲ್ಹಾನ್ ಉಮರ್ ಮತ್ತು ರಶೀದಾ ತ್ಲೈಬ್ ಇಸ್ರೇಲ್‌ನ ನಿಷೇಧಕ್ಕೆ ಒಳಗಾದವರು. ಈ ಇಬ್ಬರು ಸಂಸದೆಯರ ವಿರುದ್ಧ ತೆಗೆದುಕೊಂಡಿರುವ ಈ ಅಸಾಮಾನ್ಯ ನಿರ್ಧಾರವು ಅಗತ್ಯವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ‘‘ಅವರ ಏಕೈಕ ಉದ್ದೇಶ ಇಸ್ರೇಲ್‌ಗೆ ಹಾನಿ ಮಾಡುವುದಾಗಿದೆ ಹಾಗೂ ಅದರ ವಿರುದ್ಧದ ಪ್ರಚೋದನೆಯನ್ನು ಹೆಚ್ಚಿಸುವುದಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಲ್ಹಾನ್ ಉಮರ್, ‘‘ಇದೊಂದು ಆಘಾತಕಾರಿ ನಿರ್ಧಾರ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅವಮಾನ’’ ಎಂದು ಬಣ್ಣಿಸಿದ್ದಾರೆ.

ಉಮರ್ ಮತ್ತು ತ್ಲೈಬ್ ವಾರಾಂತ್ಯದಲ್ಲಿ ಇಸ್ರೇಲ್‌ಗೆ ಭೇಟಿ ನೀಡುವವರಿದ್ದರು ಹಾಗೂ ಅಲ್ಲಿಂದ ಫೆಲೆಸ್ತೀನ್ ಭೂಭಾಗಗಳಿಗೂ ಅವರು ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು.

ಡೆಮಾಕ್ರಟಿಕ್ ಪಕ್ಷದ ಸಂಸದೆಯರ ಪ್ರವಾಸವನ್ನು ನಿಷೇಧಿಸುವಂತೆ ಟ್ರಂಪ್ ಇಸ್ರೇಲ್‌ಗೆ ಕರೆ ನೀಡಿದ ಬಳಿಕ, ಇಸ್ರೇಲ್ ತನ್ನ ನಿರ್ಧಾರವನ್ನು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News