ಲೈಂಗಿಕ ಕಿರುಕುಳ ಪ್ರಕರಣ: ಮೇಜರ್ ಜನರಲ್ ಪಿಂಚಣಿ ರಹಿತ ವಜಾ

Update: 2019-08-16 17:35 GMT

ಹೊಸದಿಲ್ಲಿ, ಆ. 16: ಕ್ಯಾಪ್ಟನ್ ರ್ಯಾಂಕ್‌ನ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಮೇಜರ್ ಜನರಲ್ ಆರ್.ಎಸ್. ಜಸ್ವಾಲ್‌ನನ್ನು ಪಿಂಚಣಿ ರಹಿತವಾಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮೇಜರ್ ಜನರಲ್ ಆರ್.ಎಸ್. ಜಸ್ವಾಲ್ ವಿರುದ್ಧ ಕೋರ್ಟ್ ಮಾರ್ಷಲ್ ನಡೆಸಿರುವುದನ್ನು ಸೇನಾ ವರಿಷ್ಠ ಬಿಪಿನ್ ರಾವತ್ ಶುಕ್ರವಾರ ದೃಢಪಡಿಸಿದ್ದಾರೆ.

‘‘ಜಸ್ವಾಲ್‌ಗೆ ಶಿಕ್ಷೆ ವಿಧಿಸಿರುವುದನ್ನು ಬಿಪಿನ್ ರಾವತ್ ದೃಢಪಡಿಸಿದ್ದಾರೆ. ಸೇನಾ ಸಿಬ್ಬಂದಿಯ ವರಿಷ್ಠರ ನಿರ್ಧಾರವನ್ನು 2 ಕಾರ್ಪ್ಸ್ ಕಮಾಂಡರ್ ಲೆಫ್ಟೆನೆಂಟ್ ಜನರಲ್ ಎಂ.ಜೆ.ಎಸ್. ಕಹ್ಲೋನ್ ಮೂಲಕ ಮೇಜರ್ ಜನರಲ್ ಜಸ್ವಾಲ್ ಅವರಿಗೆ ಅಂಬಾಲದಲ್ಲಿ ಶುಕ್ರವಾರ ತಿಳಿಸಲಾಗಿದೆ’’ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸೇನಾ ಜನರಲ್ ಕೋರ್ಟ್ ಮಾರ್ಷಲ್‌ನಲ್ಲಿ ಮೇಜರ್ ಜನರಲ್ ಜಸ್ವಾಲ್‌ನನ್ನು ವಜಾಗೊಳಿಸಲು ಶಿಫಾರಸು ಮಾಡಲಾಗಿತ್ತು.

ಸೇನೆಯ ಪಶ್ಚಿಮ ಕಮಾಂಡ್‌ನ ವ್ಯಾಪ್ತಿಯಲ್ಲಿ ಬರುವ ಚಂಡಿಮಂದಿರ್‌ಗೆ ಮೇಜರ್ ಜನರಲ್ ಜಸ್ವಾಲ್ ನಿಯೋಜನೆಯಾಗಿದ್ದಾಗ 2016ರಲ್ಲಿ ಕ್ಯಾಪ್ಟನ್ ರ್ಯಾಂಕ್‌ನ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿತ್ತು. ಈ ಆರೋಪವನ್ನು ಜಸ್ವಾಲ್ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News