ಮಂಗಳೂರಿನಲ್ಲಿ ಬಂಧಿತರ ಹಿಂದಿದೆ ಭಾರೀ ವಂಚನಾ ಜಾಲ: ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

Update: 2019-08-17 07:19 GMT

ಮಂಗಳೂರು, ಆ. 18: ನಗರದ ಲಾಡ್ಜ್ ನಲ್ಲಿ ಬಂಧಿತರ ಹಿಂದೆ ಭಾರೀ ವಂಚನಾ ಜಾಲ ಇದೆ ಎಂದು ಮಂಗಳೂರಿನಲ್ಲಿ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಬಂಧಿತರನ್ನು ಕೇರಳದ ಕೋಯಿಲಾಡ್ ನಿವಾಸಿ ಟಿ ಸ್ಯಾಮ್ ಪೀಟರ್ (53), ಮಡಿಕೇರಿ ಸಿದ್ಧಪುರದ ಟಿ.ಕೆ. ಬೋಪಣ್ಣ (33), ಬೆಂಗಳೂರು ನೀಲಸಂದ್ರ ನಿವಾಸಿ ಮದನ್ (41), ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿ ಚಿನ್ನಪ್ಪ (38), ಬೆಂಗಳೂರು ಕನಕಪುರದ ಸುನೀಲ್ ರಾಜು (35), ಬೆಂಗಳೂರು ಉತ್ತರಹಳ್ಳಿಯ ಕೋದಂಡರಾಮ (39), ಕೂಳೂರು ನಿವಾಸಿ ಜಿ ಮೊಯ್ದಿನ್ ಯಾನೆ ಚೆರಿಯ (70), ಪಳ್ನೀರ್ ನಿವಾಸಿ ಎಸ್.ಎ.ಕೆ. ಅಬ್ದುಲ್ ಲತೀಫ್ (59) ಎಂದು ಗುರುತಿಸಲಾಗಿದೆ.

ಸ್ವಾತಂತ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ‌ನಗರದಾದ್ಯಂತ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಪಂಪ್ ವೆಲ್ ಬಳಿ ಭಾರತ ಸರ್ಕಾರದ ಬೋರ್ಡ್ ಹಾಕಿ, ಟಿಂಟ್ ಹಾಕಿದ ಅನುಮಾನಾಸ್ಪದ ಕಾರು ಪತ್ತೆಯಾಗಿತ್ತು. ಪೊಲೀಸರು ತಪಾಸಣೆಗೆ ಮುಂದಾದಾಗ ತಂಡವೊಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆ ಬಳಿಕ ಪೊಲೀಸರು ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ಈ ಸಂದರ್ಭ ತಿಳಿಸಿದರು.

ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಠರ್ ಎಂಬಾತನಿಗೆ ಕೊಲ್ಕತ್ತಾ, ಭುವನೇಶ್ವರ ಸೇರಿ ಹಲವೆಡೆ ಸಂಪರ್ಕವಿದೆ. ಸರ್ಕಾರಿ ಅಧಿಕಾರಿಗಳಿಗೆ ಇರುವಂತೆ ಈತನಿಗೂ 5 ಗನ್ ಮ್ಯಾನ್ ಗಳಿದ್ದು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನಿಗೆ ನೆರವು ನೀಡಿದ ಆರೋಪದಲ್ಲಿ ಮಂಗಳೂರು ನಿವಾಸಿಗಳಾದ ಲತೀಫ್ ಮತ್ತು ಮೊಯ್ದಿನ್ ರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳಿಗೆ  2 ಕಾರು, ಒಂದು ರಿವಾಲ್ವಾರ್, 8 ಗುಂಡುಗಳು ಹಾಗು ಇತರ ಸೊತ್ತುಗಳನ್ನು ಪಡೆಯಲಾಗಿದೆ. ಇವರು ಅಂತರ್ ರಾಜ್ಯ ವಂಚನಾ ಜಾಲದ ತಂಡ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಪೊಲೀಸ್ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಅವರು ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News