ದಮಾಮ್ ವಿಮಾನ ನಿಲ್ದಾಣದಲ್ಲಿ ಕಾಯಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ : ಪ್ರಯಾಣಿಕರ ಆರೋಪ

Update: 2019-08-17 08:10 GMT

ಮಂಗಳೂರು, ಆ.17: ದಮಾಮ್‌ನಿಂದ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ವಿಮಾನವು ಯಾವುದೇ ಕಾರಣ ನೀಡದೆ ಪ್ರಯಾಣಿಕರನ್ನು ಎರಡುವರೆ ಗಂಟೆಗಳ ಕಾಲ ದಮಾಮ್ ವಿಮಾನ ನಿಲ್ದಾಣದಲ್ಲಿ ಕಾಯಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ.

ಶುಕ್ರವಾರ ರಾತ್ರಿ 10 ಗಂಟೆಗೆ ದಮಾಮ್‌ನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನ ಹೊರಡಬೇಕಿತ್ತು. ಆದರೆ, ಪ್ರಯಾಣಿಕರು ವಿಮಾನ ಏರಿದರೂ ಕೂಡ ಈ ವಿಮಾನ ಕ್ಲಪ್ತ ಸಮಯಕ್ಕೆ ಹಾರಾಡಲಿಲ್ಲ. ತಡವಾದುದರ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದರೂ ಅಧಿಕಾರಿಗಳಿಂದ ಉತ್ತರ ಸಿಗಲಿಲ್ಲ. ಇದರಿಂದ ಹತಾಶರಾದ ಪ್ರಯಾಣಿಕರು ಸುಮಾರು ಎರಡುವರೆ ಗಂಟೆಗಳ ಕಾಲ ವಿಮಾನದಲ್ಲೇ ಕಳೆಯಬೇಕಾಯಿತು. ಕೊನೆಗೆ ಈ ವಿಮಾನ ರಾತ್ರಿ 12:30ಕ್ಕೆ ಪ್ರಯಾಣ ಆರಂಭಿಸಿದ್ದು, ಶನಿವಾರ ಮುಂಜಾನೆ 7:30ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿದರು. ಇದರಿಂದ ಪ್ರಯಾಣಿಕರನ್ನು ಬರಮಾಡಿಕೊಳ್ಳಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಪ್ರಯಾಣಿಕರ ಸಂಬಂಧಿಕರು ಕೂಡ ಹತಾಶರಾಗಬೇಕಾಯಿತು ಎಂದು ತಿಳಿದುಬಂದಿದೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ ಉಳ್ಳಾಲದ ಸುಹಾನಾ ವಿಮಾನದಲ್ಲಿ ಹಿರಿಯರು, ಮಕ್ಕಳು, ಮಹಿಳೆಯರಿದ್ದರು. ನಾವು ಕ್ಲಪ್ತ ಸಮಯಕ್ಕೆ ವಿಮಾನ ಏರಿದ್ದೆವು. ರಾತ್ರಿ 10 ಗಂಟೆಗೆ ಹೊರಡಬೇಕಿದ್ದ ವಿಮಾನವು 12:30ಕ್ಕೆ ಹೊರಟಿತು. ವಿಮಾನ ಯಾನ ವಿಳಂಬಕ್ಕೆ ಕಾರಣ ಏನು ಎಂದು ಕೇಳಿದರೆ ಯಾರಿಂದಲೂ ಸ್ಪಷ್ಟ ಉತ್ತರ ಬರಲಿಲ್ಲ. ರಾತ್ರಿಯ ಊಟದ ವ್ಯವಸ್ಥೆಯನ್ನೂ ಮಾಡಲಿಲ್ಲ. ಅದಲ್ಲದೆ ವೃದ್ಧರೊಬ್ಬರಿಗೆ ವಿಮಾನದಲ್ಲೇ ಅನಾರೋಗ್ಯ ಕಾಡಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ. ಮುಂದೇನು ಆಗಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದಿಲ್ಲ’ ಎಂದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಬಳಿ ಈ ಬಗ್ಗೆ ಸ್ಪಷ್ಟಣೆ ಬಯಸಿದಾಗ ''ನಾವು ಈ ಕುರಿತು ಚರ್ಚೆ ನಡೆಸಿದ್ದೇವೆ. ವಿಳಂಬ ಆಗಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಇನ್ನು ದಮಾಮ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎದುರಾಗುವ ಸಮಸ್ಯೆಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ'' ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News