ಶಾಸಕನ ಮನೆ ಮೇಲೆ ಪೊಲೀಸ್ ದಾಳಿ: ಎಕೆ-47, ಸ್ಫೋಟಕಗಳು ಪತ್ತೆ

Update: 2019-08-17 08:24 GMT

ಪಾಟ್ನಾ, ಆ.17: ಬಿಹಾರದ ಪಕ್ಷೇತರ ಶಾಸಕನ ಮನೆ ಮೇಲೆ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿದ ಪೊಲೀಸರು, ಗುಂಡು ತುಂಬಿದ್ದ ಎಕೆ-47 ವಶಪಡಿಸಿಕೊಂಡಿದ್ದಾರೆ.

ಹಿಂದೆ ಜೆಡಿಯು ಪಕ್ಷದಲ್ಲಿದ್ದ ಬಳಿಕ ಮೊಕಾಮ ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಶಾಸಕ ಅನಂತ್ ಕುಮಾರ್ ಸಿಂಗ್ ಮನೆಯ ಮೇಲೆ ದಾಳಿ ನಡೆಸಲಾಯಿತು. ಗ್ರಾಮೀಣ ಪಾಟ್ನಾದ ಲದಮಾ ಗ್ರಾಮದಲ್ಲಿರುವ ಶಾಸಕರ ಮನೆಯಲ್ಲಿ ಸಿಕ್ಕಿದ ಕೈಬಾಂಬ್ ‍ಗಳನ್ನು ಬಾಂಬ್ ನಿಷ್ಕ್ರಿಯದಳ ನಿಷ್ಕ್ರಿಯಗೊಳಿಸಿತು.

ಶಾಸಕರು ಅಕ್ರಮವಾಗಿ ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂಬ ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆಸಲಾಯಿತು ಎಂದು ಗ್ರಾಮೀಣ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಮನೆಯ ಉಸ್ತುವಾರಿ ಹೊಂದಿದ್ದವರು ಮತ್ತು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಇಡೀ ಕಾರ್ಯಾಚರಣೆಯನ್ನು ವಿಡಿಯೊದಲ್ಲಿ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ಎರಡು ಮಹಡಿಯ ಮನೆಯಲ್ಲಿ, ಸುರಂಗಗಳಿದ್ದು, ಶಸ್ತ್ರಸಜ್ಜಿತ ಅಪರಾಧಿಗಳು ಆಸರೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಸುರಂಗಮಾರ್ಗ ಒಂದು ಕೆರೆಗೆ ಸಂಪರ್ಕ ಹೊಂದಿದೆ. ಲೋಹಶೋಧಕ ಯಂತ್ರದಲ್ಲಿ ಪತ್ತೆಯಾಗದಂತೆ ಎಕೆ-47 ಆಯುಧಕ್ಕೆ ಇಂಗಾಲದ ಲೇಪನವಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಸಾಮಾನ್ಯವಾಗಿ ಉಗ್ರರು ಅಥವಾ ಮಾವೋವಾದಿಗಳಿಂದ ವಶಪಡಿಸಿಕೊಳ್ಳಲಾಗುವ 26 ಸಜೀವ ಗುಂಡುಗಳು, ಒಂದು ಎಕೆ-47 ಆಯುಧ, ಮ್ಯಾಗಝಿನ್ ಹಾಗೂ ಸ್ಫೋಟಕಗಳು ಸಿಕ್ಕಿವೆ. ಸಾರ್ವಜನಿಕ ಸೇವಕರ ಮನೆಯಲ್ಲಿ ಇವುಗಳು ದೊರಕಿರುವುದು ಅಚ್ಚರಿ ಎಂದು ಗೃಹ ಇಲಾಖೆ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News