‘ಉತ್ತಮ ಪೊಲೀಸ್’ ಪ್ರಶಸ್ತಿ ಪಡೆದ ಮರುದಿನವೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಪೇದೆ!
ಹೈದರಾಬಾದ್, ಆ.17: ಉತ್ತಮ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಸ್ತಿ ಪಡೆದ ಮರುದಿನವೇ ಪ್ರಶಸ್ತಿ ಪುರಸ್ಕೃತ ಪೊಲೀಸ್ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಮೆಹಬೂಬನಗರದ ಐ-ಟೌನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪಲ್ಲೆ ತಿರುಪತಿ ರೆಡ್ಡಿ, ಸ್ವಾತಂತ್ರ್ಯ ದಿನದಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರೇಮ ರಾಜೇಶ್ವರಿ ಸಮ್ಮುಖದಲ್ಲಿ ಅಬಕಾರಿ ಸಚಿವ ವಿ.ಶ್ರೀನಿವಾಸ ಗೌಡ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.
ಮರುದಿನವೇ ಪೊಲೀಸ್ ಪೇದೆ ಮತ್ತೆ ಸುದ್ದಿಯಲ್ಲಿದ್ದಾರೆ. ರೆಡ್ಡಿ, ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೇ ಇರುವ ಸಲುವಾಗಿ ಲಂಚ ಪಡೆದಿದ್ದಾನೆ ಎನ್ನಲಾಗಿದ್ದು, 17 ಸಾವಿರ ರೂಪಾಯಿ ನಗದು ಸಹಿತ ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಆತನನ್ನು ಬಂಧಿಸಿದೆ.
“ಸೂಕ್ತ ದಾಖಲೆಗಳನ್ನು ಹೊಂದಿ ಮರಳು ಸಾಗಿಸುತ್ತಿರುವ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ” ಎಂದು ದೂರುದಾರ ರಮೇಶ್ ಹೇಳಿದ್ದಾರೆ. ಎಸಿಬಿ ಕೋರ್ಟ್ ಮುಂದೆ ಈತನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.