ಪಾದುವಾ ಕಾಲೇಜು: ಮನಸೂರೆಗೊಂಡ ರಂಗಗೀತೆಗಳ ಪ್ರಸ್ತುತಿ

Update: 2019-08-17 09:31 GMT

ಮಂಗಳೂರು: ಪಾದುವಾ ಕಾಲೇಜು ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ನಾಟಕ ತಂಡವಾದ ಪಾದುವ ರಂಗ ಅಧ್ಯಯನ ಕೇಂದ್ರ ಮಂಗಳೂರು ಆಯೋಜಿಸುತ್ತಿರುವ ನೂರು ದಿನಗಳ‌ ರಂಗ ಶಿಬಿರದ ಅಂಗವಾಗಿ ರಂಗಗೀತೆಗಳ ಪ್ರಸ್ತುತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಖ್ಯಾತ ಸಿನೇಮಾ‌ ಹಾಗೂ ರಂಗ ನಿರ್ದೇಶಕರಾದ ಶ್ರೀ. ರಾಜ್ ಗುರು ಹೊಸಕೋಟೆ ಹಾಗೂ ರಂಗ ನಟಿ, ನಯನ‌ ಸೂಡ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಎರಡು ದಿನಗಳ ರಂಗಗೀತೆಗಳ ಕಾರ್ಯಗಾರದ ನಂತರ ಈ ಕಾರ್ಯಕ್ರಮದ ಪ್ರಸ್ತುತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರಂಗಗೀತೆಗಳ ಕಾರ್ಯಗಾರದಲ್ಲಿ ಶಿಬಿರಾರ್ಥಿಗಳಲ್ಲದೇ ಆಸಕ್ತ ಸಾರ್ವಜನಿಕರೂ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಪ್ರಸ್ತುತಿಯಲ್ಲಿ ಎರಡು ರಂಗಗೀತೆಗಳನ್ನು ಶಿಬಿರಾರ್ಥಿಗಳು ಪ್ರಸ್ತುತ ಪಡಿಸಿದರು.

ಸ್ವಾತಂತ್ರ್ಯ ದಿನದಂದು ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ರಂಗಕರ್ಮಿಗಳು, ರಂಗಾಸಕ್ತರು, ಭಾಗವಹಿಸಿದ್ದರು. ಕಾಲೇಜಿನ‌ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ಸ್ವಾಗತಗೈದು ಕಾಲೇಜಿನ ವತಿಯಿಂದ ಹಮ್ಮಿಕೊಂಡಿರುವ ನಿರಂತರ ಚಟುವಟಿಕೆಗಳ ಬಗ್ಗೆ ಪ್ರಸ್ತಾವನೆಗೈದರು.

ಕೇರಳದ ಲಿಟ್ಲ್ ಸ್ಕೂಲ್ ಆಫ್ ಥಿಯೇಟರ್ ಇದರ ನಿರ್ದೇಶಕರಾದ, ಇತ್ತೀಚಿಗೆ 'ಮೆಟ'  ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅರುಣ್ ಲಾಲ್ ಇವರನ್ನು ಇದೇ ಹೊತ್ತಿನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ನೆರೆ ಸಂತ್ರಸ್ತರಿಗಾಗಿ ಪಾದುವಾ ಕಾಲೇಜು ನಡೆಸುವ ಅಭಿಯಾನಕ್ಕಾಗಿ ವಸ್ತುಗಳನ್ನು ಸಂಗ್ರಹಿಸಲಾಯಿತು.

ಸುಮಾರು ಎರಡು ತಾಸುಗಳ ಹೊತ್ತು ನಡೆದ ಈ ಕಾರ್ಯಕ್ರಮದಲ್ಲಿ ರಂಗಗೀತೆಗಳಲ್ಲದೇ, ಹೊಸ್ಕೋಟೆ ಪರಂಪರೆಯ ಗೀತೆಗಳನ್ನು, ಜನಪದ ಗೀತೆಗಳನ್ನೂ ಹಾಡಿ ನೆರೆದ ಸಭಿಕರನ್ನು ರಂಜಿಸಿದರು. ಕತ್ತಲೆ ಹಾಡು ಎಂಬ ಸರಣಿಯ ಮುಖಾಂತರ ಮನೆಮಾತಾಗಿರುವ ನಾದಾ ಮಣಿನಾಲ್ಕೂರ್ ಇವರು ಹಾಗೂ ಸಾತ್ವಿಕ ರಂಗಪಯಣ ತಂಡದ ಕಲಾವಿದರೂ ಈ ಕಾರ್ಯಕ್ತಮಕ್ಕೆ ಸಾಥ್ ನೀಡಿದರು.

ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಅರೆಹೊಳೆ ಪ್ರತಿಷ್ಠಾನದ, ಅರೆಹೊಳೆ ಸದಾಶಿವರಾವ್ ಉಪಸ್ಥಿತರಿದ್ದರು. ಪಾದುವಾ ಕಾಲೇಜಿನಲ್ಲಿ ನಿರಂತರ ನಡೆಯುವ ಸಾಂಸ್ಕೃತಿಕ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದ್ದು, ಆ.18ರಂದು ಸಂಜೆ 6ಕ್ಕೆ ನಂದಗೋಕುಲದ ಕಲಾವಿದೆಯರಿಂದ, 'ಪು.ತಿ.ನ.' ಇವರು ರಚಿಸಿದ 'ಗೋಕುಲ ನಿರ್ಗಮನ' ನಾಟಕದ ನೃತ್ಯರೂಪಕ ಶ್ವೇತಾ ಅರೆಹೊಳೆಯ ನಿರ್ದೇಶನದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News