ನೆರೆ ಪರಿಹಾರ: ಸಂತ್ರಸ್ತರಿಗೆ ಏನು ಕೊಡಬೇಕು ? ಯಾವುದು ಅನಗತ್ಯ ?

Update: 2019-08-17 11:27 GMT

ಮಂಗಳೂರು, ಆ.17: ಇತ್ತೀಚೆಗೆ ಸುರಿದ ಭಾರೀ ಮಳೆ, ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಗೆ ಪರಿಹಾರ ಕಲ್ಪಿಸುವ ಸಲುವಾಗಿ ನಗರದ ಕೆಪಿಟಿಯಲ್ಲಿ‌ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಹಳೆಯ ಯಾವುದೇ ವಸ್ತು, ಬಟ್ಟೆ ಬರೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪರಿಹಾರ ಕೇಂದ್ರದ ನೋಡಲ್ ಅಧಿಕಾರಿ ಗೋಕುಲದಾಸ್ ನಾಯಕ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಬೆಳಗ್ಗೆ 9ರಿಂದ ಸಂಜೆ 6:30ರವರೆಗೆ ಕೇಂದ್ರ ತೆರೆದಿರುತ್ತದೆ. ಸದ್ಯ ಆಹಾರ ಸಾಮಗ್ರಿಗಳು, ಔಷಧಗಳನ್ನು ಕೂಡಾ ಸ್ವೀಕರಿಸಲಾಗುವುದಿಲ್ಲ. ಈಗಾಗಲೆ ಸ್ವೀಕರಿಸಲಾದ ಸಾಮಗ್ರಿಗಳನ್ನು ಬೆಳ್ತಂಗಡಿ ಮತ್ತಿತರ ಕಡೆಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರಿಗೆ ನೀಡುವ ಪ್ರಕ್ರಿಯೆ ಮುಂದುವರಿದಿದೆ ಎಂದರು.

ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಗೂ ಸಾಮಗ್ರಿಗಳನ್ನು ಕಳುಹಿಸಿಕೊಡುವ ನಿರ್ಧಾರಕ್ಕೆ ಬರಲಾಗಿದೆ. ಹಾಗಾಗಿ ದಾನಿಗಳು ಉದಾರ ಮನಸ್ಸಿನಿಂದ ಹಳೆಯ ಯಾವುದೇ ವಸ್ತುಗಳು, ಅಕ್ಕಿ, ಸಕ್ಕರೆ, ಚಾಹುಡಿ ಇತ್ಯಾದಿ ಆಹಾರ ಸಾಮಗ್ರಿಗಳು, ಮೆಡಿಕಲ್ ಸಾಮಗ್ರಿಗಳನ್ನು ಹೊರತುಪಡಿಸಿ ಬೆಡ್ ಶೀಟ್, ಎಲ್ಲಾ ವಯೋಮಾನದವರು ಬಳಸಬಹುದಾದ ಅಂಗಿ, ಲುಂಗಿ, ಪ್ಯಾಂಟ್, ಸೀರೆ, ಚೂಡಿದಾರ, ನೈಟಿ ಸಹಿತ ಎಲ್ಲಾ ಬಗೆಯ ಹೊಸ ಬಟ್ಟೆಬರೆಗಳು, ಶಾಂಪು, ಸಾಬೂನು, ತಲೆದಿಂಬು, ಚಾಪೆ, ಬಾತ್ ಟವೆಲ್, ಕೊಡೆ, ಟಾರ್ಚ್ ಲೈಟ್, ಅಡುಗೆ ಪಾತ್ರೆ ಪಗಡೆ, ಗ್ಯಾಸ್ ಸ್ಟವ್, ಪ್ಲಾಸ್ಟಿಕ್ ಬಕೆಟ್/ಮಗ್, ರೈನ್ ಕೋಟ್, ಚಪ್ಪಲಿ/ಶೂ, ನ್ಯಾಪ್ ಕಿನ್, ಕ್ಯಾಪ್, ಸೊಳ್ಳೆಬತ್ತಿ, ಕ್ಲೀನಿಂಗ್ ಲಿಕ್ವಿಡ್, ಕ್ಯಾಂಡಲ್, ಬೆಂಕಿಪೊಟ್ಟಣ, ಶಾಲಾ ಬ್ಯಾಗ್, ಲಗ್ಗೇಜ್ ಬ್ಯಾಗ್, ಅಡುಗೆ ಎಣ್ಣೆ ಇತ್ಯಾದಿ ದಿನ ಬಳಕೆಯ ಸಾಮಗ್ರಿಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.

ಅಧಿಕ‌ ಪ್ರಮಾಣದಲ್ಲಿ ವಾಹನಗಳಲ್ಲಿ ಸಾಮಗ್ರಿಗಳನ್ನು ಸಾಗಾಟ ಮಾಡಿಕೊಂಡು ಬರುವವರಿಗೆ ಟೋಲ್ ಫ್ರೀ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ‌ ಮಾಹಿತಿಗೆ ತನ್ನನ್ನು (ಮೊ.ಸಂ: 9448951722)ಸಂಪರ್ಕಿಸಬಹುದು ಎಂದು ಗೋಕುಲ್ ದಾಸ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News