ಇಸ್ಲಾಂ ಧರ್ಮ, ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ದೂರು ದಾಖಲು

Update: 2019-08-17 12:55 GMT

ಮಂಗಳೂರು, ಆ.17: ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮ ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

‘ವಿಕ್ರಂ ದಾಸ್ ಯಾನೆ ವಿಕ್ಕಿ ಎಂಬ ಹೆಸರಿನಲ್ಲಿ ಶುಕ್ರವಾರ ಮಧ್ಯಾಹ್ನ 12:26ರ ಸುಮಾರು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮ ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಹೇಳನಕಾರಿ ಮಾತುಗಳನ್ನಾಡಿದ್ದಾನೆ. ಆರೋಪಿಯು ಇಸ್ಲಾಂ ಧರ್ಮ ಉಲ್ಲೇಖಿಸಿ ಅಪಮಾನ ಮಾಡಿ ಆಡಿಯೋವನ್ನು ವೈರಲ್ ಮಾಡಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಇದು ಜಿಲ್ಲೆ ಮಾತ್ರವಲ್ಲದೆ, ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ನಿಂದನೆಯಾಗಿದೆ. ಶಾಂತಿ-ಸೌಹಾರ್ದದಿಂದ ಇರುವ ದ.ಕ. ಜಿಲ್ಲೆಯಲ್ಲಿ ಮತ್ತೆ ದ್ವೇಷ ಹರಡಿಸಿ ಕೋಮು ಗಲಭೆ ಸೃಷ್ಟಿಸಲು ಆತ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಷ್ಕರ್ಮಿಯ ಬಂಧನಕ್ಕೆ ಎಸ್‌ಡಿಪಿಐ ಒತ್ತಾಯ

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿ, ವೈರಲ್ ಮಾಡಿರುವ ದುಷ್ಕರ್ಮಿಯನ್ನು ಕೂಡಲೇ ಬಂಧಿಸಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ. ಆತನ ಕೃತ್ಯದ ಹಿಂದೆ ಕೋಮುಗಲಭೆ ಎಬ್ಬಿಸುವ ಹುನ್ನಾರ ಇದೆ. ಇಂತಹ ಕೃತ್ಯಗಳನ್ನು ಪೊಲೀಸರು ಬಯಲಿಗೆಳೆಯಬೇಕು ಎಂದು ಎಸ್‌ಡಿಪಿಐ ಮುಖಂಡರಾದ ವಾಜಿದ್ ಹಾಗೂ ಸುಹೈಲ್ ಖಾನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News