ಪ್ರಾಕೃತಿಕ ವಿಕೋಪ ಹಿನ್ನೆಲೆ: ಪಾವೂರು-ಇನೋಳಿಯ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ಹಿಂದೂ ಕುಟುಂಬಕ್ಕೆ ಆಶ್ರಯ

Update: 2019-08-17 12:58 GMT

ಮಂಗಳೂರು, ಆ.17: ಕಳೆದ ವಾರ ಸುರಿದ ಭಾರೀ ಮಳೆಯಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ ಪರಿಣಾಮ ಮನೆಯನ್ನು ಕಳೆದುಕೊಂಡ ಹಿಂದೂ ಕುಟುಂಬವೊಂದಕ್ಕೆ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲೇ ಆಶ್ರಯ ನೀಡಿದ ಘಟನೆ ಪಾವೂರು ಗ್ರಾಮದ ಇನೋಳಿಯಲ್ಲಿ ಬೆಳಕಿಗೆ ಬಂದಿದೆ.

ಇನೋಳಿ ಪೊರ್ಸೋಟದ ಜಯಂತ್-ಸತ್ಯಾವತಿಯ ಕುಟುಂಬವು ಕಳೆದ 8 ವರ್ಷದಿಂದ ಸ್ವಂತ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ಮೊನ್ನೆ ಸುರಿದ ಭಾರೀ ಮಳೆಗೆ ಇವರ ಕಾಂಪೌಂಡ್ ಜರಿದ ಪರಿಣಾಮ ಮನೆಯ ಅಡಿಪಾಯಕ್ಕೆ ಹಾನಿಯಾಗುವ ಭೀತಿ ಎದುರಾಗಿತ್ತು. ಅಲ್ಲದೆ ಈ ಮನೆಯಲ್ಲಿ ಸೋರಿಕೆಯೂ ಕಂಡು ಬಂದ ಕಾರಣ ವಾಸಿಸಲು ಸಾಧ್ಯವಿಲ್ಲದ ವಾತಾವರಣ ಸೃಷ್ಟಿಯಾಗಿತ್ತು. ಹಾಗಾಗಿ ಈ ಕುಟುಂಬಕ್ಕೆ ಸ್ಥಳಾಂತರಗೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ತಕ್ಷಣಕ್ಕೆ ಸ್ಥಳಾಂತರಗೊಳ್ಳುವುದು ಎಲ್ಲಿಗೆ ? ಎಂಬ ಪ್ರಶ್ನೆ ಎದ್ದಾಗ ನೆರವಿಗೆ ಧಾವಿಸಿದವರು ಇನೋಳಿಯ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಗೌರವಾಧ್ಯಕ್ಷ ಮುಹಮ್ಮದ್ (ಚಕ್ಕರ್ ಮೋನು), ಸಂಚಾಲಕ ಟಿ.ಎಚ್. ಅಬ್ಬಾಸ್, ಅಧ್ಯಕ್ಷ ಮುಹಮ್ಮದ್ ಶರೀಫ್ ಹಾಗೂ ಪಾವೂರು ಗ್ರಾಪಂ ಅಧ್ಯಕ್ಷ ಎಂ.ಟಿ. ಫಿರೋಝ್. ಇವರು ಸಂಘಟನೆಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರ ಬಳಿ ಚರ್ಚೆ ನಡೆಸಿ ಈ ಕುಟುಂಬಕ್ಕೆ ಆಶ್ರಯ ನೀಡಲು ನಿರ್ಧರಿಸಿದರು.

‘ನೀವೇನು ಗಾಬರಿಯಾಗಬೇಡಿ. ಮೊದಲು ಮನೆಯನ್ನು ಖಾಲಿ ಮಾಡಿ. ಹಾಗೇ ನಮ್ಮ ಕಚೇರಿಯಲ್ಲಿ ಸದ್ಯ ಆಶ್ರಯ ಪಡೆಯಿರಿ’ ಎಂದು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಪದಾಧಿಕಾರಿಗಳು ಆಹ್ವಾನವಿತ್ತಾಗ ಅದನ್ನು ಜಯಂತ್-ಸತ್ಯಾವತಿ ದಂಪತಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಅನಿರೀಕ್ಷಿತವಾಗಿ ಬಂದ ಈ ಮನವಿಯನ್ನು ತಿರಸ್ಕರಿಸಲಾಗದ ಜಯಂತ್-ಸತ್ಯಾವತಿ ಸಂತೋಷದಿಂದಲೇ ಒಪ್ಪಿಕೊಂಡು ಮನೆ ಖಾಲಿ ಮಾಡಿದರು. ಹಾಗೆ ಆ.13ರ ಮಂಗಳವಾರದಿಂದ ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖೆಯ ಕಚೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಂದಹಾಗೆ ಈ ಕಚೇರಿಯಲ್ಲಿ ಎರಡು ಕೋಣೆ, ಶೌಚಾಲಯದ ವ್ಯವಸ್ಥೆಯೂ ಇದ್ದ ಕಾರಣ ಕುಟುಂಬಕ್ಕೆ ವಾಸಿಸಲು ಯಾವುದೇ ಸಮಸ್ಯೆಯಾಗಲಿಲ್ಲ.

ಜಯಂತ್ ಬಸ್ಸುಗಳನ್ನು ತೊಳೆಯುವುದರ ಸಹಿತ ಇತರ ಕೂಲಿ ಕೆಲಸಗಳನ್ನು ಮಾಡುತ್ತಿದ್ದರೆ, ಸತ್ಯಾವತಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಸಂಜನಾ (14) ಮತ್ತು ವನಶಿಕ (7) ಎಂಬಿಬ್ಬರು ಮಕ್ಕಳಿದ್ದಾರೆ. ಸಂಜನಾ ಸ್ಥಳೀಯ ಶಾಲೆಯ 7ನೆ ಮತ್ತು ವನಶಿಕ 2ನೆ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದ ಇವರು ಮೂಲತಃ ಸಜಿಪದವರು. 8 ವರ್ಷದ ಹಿಂದೆ ಇವರು ಇನೋಳಿಗೆ ಬಂದು ನೆಲೆಸಿದ್ದಾರೆ. ಸ್ವಂತ ಜಮೀನು ಮತ್ತು ಮನೆ ಇದ್ದೂ ಕೂಡ ಬದುಕಲಾಗದಂತಹ ಸ್ಥಿತಿಯಲ್ಲಿದ್ದ ಈ ಕುಟುಂಬಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಪ್ರಮುಖರು ಆಶ್ರಯ ನೀಡುವ ಮೂಲಕ ‘ಮಾನವೀಯತೆ ಮತ್ತು ಮನುಷ್ಯತ್ವ’ ಅಳಿದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಕಾಂಪೌಂಡ್ ಹಾನಿಗೀಡಾಗಿ ಮನೆಯಲ್ಲಿ ವಾಸಿಸಲು ಅಸಾಧ್ಯದ ಸ್ಥಿತಿಯಲ್ಲಿ ಕುಟುಂಬವಿದೆ ಎಂಬ ಮಾಹಿತಿ ತಿಳಿದ ತಕ್ಷಣ ನಾನು ಇನೋಳಿ ಪೊರ್ಸೊಟಕ್ಕೆ ಧಾವಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದೆ. ತಕ್ಷಣಕ್ಕೆ ಈ ಕುಟುಂಬಕ್ಕೆ ನೆಲೆಸಲೊಂದು ಸೂರು ಬೇಕಾಗಿತ್ತು. ಹಾಗೇ ಅಪಾಯದ ಅಂಚಿನಲ್ಲಿದ್ದ ಈ ಮನೆಯ ಮುಂದೆಯೇ ಎಸ್ಕೆಎಸ್ಸೆಸ್ಸೆಫ್ ಕಚೇರಿ ಇತ್ತು. ನನ್ನ ಜೊತೆ ಗ್ರಾಪಂ ಸದಸ್ಯರೂ, ಸ್ಥಳೀಯ ಮಸೀದಿಯ ಉಪಾಧ್ಯಕ್ಷರೂ, ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಗೌರವಾಧ್ಯಕ್ಷರೂ ಆದ ಮುಹಮ್ಮದ್ ಅವರಿದ್ದರು. ವ್ಯವಸ್ಥೆ ಆಗುವವರೆಗೆ ಈ ಕಚೇರಿಯಲ್ಲಿ ನೆಲೆಸಲು ವ್ಯವಸ್ಥೆ ಮಾಡಿಕೊಟ್ಟರೆ ಹೇಗೆ ಎಂದು ಕೇಳಿದೆ. ತಕ್ಷಣ ಅವರು ಸಂಘಟನೆಯ ಇತರರ ಜೊತೆ ಚರ್ಚೆ ನಡೆಸಿ ಅಂದೇ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ವಾಸಕ್ಕೆ ಅನುವು ಮಾಡಿಕೊಟ್ಟರು. ಸದ್ಯ ಈ ಕುಟುಂಬ ಈ ಕಚೇರಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ನೆಲೆಸಿದೆ. ಸರಕಾರದಿಂದ ಸಿಗುವ ಗರಿಷ್ಠ ಪ್ರಮಾಣದ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ.

- ಎಂ.ಟಿ.ಫಿರೋಝ್ ಅಧ್ಯಕ್ಷರು, ಪಾವೂರು ಗ್ರಾಮ ಪಂಚಾಯತ್

ಧಾರಾಕಾರವಾಗಿ ಸುರಿಯುವ ಮಳೆಯ ಮಧ್ಯೆ ಆರ್‌ಸಿಸಿಯಾದರೂ ಸೋರುತ್ತಿರುವ ಮತ್ತು ಕ್ಷಣಾರ್ಧದಲ್ಲಿ ಕುಸಿಯುವ ಭೀತಿಯಲ್ಲಿದ್ದ ಮನೆಯಲ್ಲಿ ಇಬ್ಬರು ಹೆಣ್ಮಕ್ಕಳ ಸಹಿತ ಈ ದಂಪತಿ ಅಲ್ಲಿ ವಾಸಿಸುವುದು ಅಪಾಯ ಎಂದು ಮನವರಿಕೆಯಾದೊಡನೆ ಸಂಘಟನೆಯ ಪ್ರಮುಖರ ಜೊತೆ ಚರ್ಚೆ ನಡೆಸಿ ವಾಸಿಸಲು ಅವಕಾಶ ಮಾಡಿಕೊಟ್ಟೆವು. ಆವಾಗ ನಾವು ಸಂತ್ರಸ್ತ ಕುಟುಂಬದ ಜಾತಿ, ಧರ್ಮ ನೋಡಲಿಲ್ಲ. ನಮಗೆ ಮಾನವೀಯತೆಯೇ ಮುಖ್ಯವಾಗಿತ್ತು. ಅವರು ಯಾವುದೇ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಬದುಕಿದರೆ ಅದೇ ನಮಗೆ ಸಂತೋಷ.

-ಮುಹಮ್ಮದ್ ಗೌರವಾಧ್ಯಕ್ಷರು, ಎಸ್ಕೆಎಸೆಸ್ಸೆಫ್ ಇನೋಳಿ ಶಾಖೆ

ಮನೆ ಕುಸಿಯುವ ಹಂತ ತಲುಪಿ ನಮಗೆ ಅಲ್ಲಿ ವಾಸಿಸಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾದಾಗ ನಮ್ಮನ್ನು ಯಾರೂ ಕೈ ಬಿಡಲಾರರು ಎಂದು ಮನಸ್ಸು ಹೇಳುತ್ತಿತ್ತು. ಅಷ್ಟರಲ್ಲಿ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಮುಖಂಡರು ನಮ್ಮ ಕಚೇರಿಯಲ್ಲೇ ವಾಸಿಸಿರಿ ಎಂದಾಗ ನಮಗೆ ಅವರ ಮಾತನ್ನು ನಂಬಲು ಕ್ಷಣಕಾಲ ಬೇಕಾಯಿತು. ಏನೂ ಆತಂಕ ಪಡಬೇಡಿ. ಮನೆಯ ಸಾಮಾನು ಖಾಲಿ ಮಾಡಿ ಕಚೇರಿಯಲ್ಲಿ ನೆಲೆಸಿರಿ ಎಂದು ಮತ್ತೆ ಆಹ್ವಾನಿಸಿದಾಗ ನಾವು ಸಂತೋಷದಿಂದ ಒಪ್ಪಿಕೊಂಡು ಕಳೆದ ಐದು ದಿನದಿಂದ ಇಲ್ಲಿ ವಾಸಿಸುತ್ತಿದ್ದೇವೆ. ಸದ್ಯ ನಮಗೆ ಇಲ್ಲಿ ಯಾವ ಸಮಸ್ಯೆ ಇಲ್ಲ. ಕಷ್ಟಕಾಲದಲ್ಲಿ ನಮಗೆ ಆಶ್ರಯ ನೀಡಿದ ಮತ್ತು ಸಹಕರಿಸಿದ ಮುಖಂಡರಿಗೆ ಕೃತಜ್ಞತೆ ಹೇಳಿದಷ್ಟೂ ಸಾಲದು.
- ಜಯಂತ್-ಸತ್ಯಾವತಿ, ಆಶ್ರಯ ಪಡೆದ ದಂಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News