ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಲು ಸೂಚನೆ

Update: 2019-08-17 14:49 GMT

ಉಡುಪಿ, ಆ.17: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನೀರಿನ ಮೂಲಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು ಎಂದು ನಗರಸಭಾ ಪೌರಾಯುಕ್ತರಾದ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೇಡಿಮಣ್ಣಿನಿಂದ ತಯಾರಾದ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿದ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವುದು ಸೂಕ್ತ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಂಥ ವಸ್ತುಗಳಿಂದ ವಿಗ್ರಹಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಒಂದು ವೇಳೆ ಗಣೇಶ ವಿಗ್ರಹಗಳಿಗೆ ಬಣ್ಣವನ್ನು ಹಚ್ಚಬೇಕಾದಲ್ಲಿ ವಿಷಕಾರಿ ಯಲ್ಲದ, ನೀರಿನಲ್ಲಿ ಕರಗುವ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಬೇಕು. ವಿಷಪೂರಿತ, ನೀರಿನಲ್ಲಿ ಕರಗದ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸು ವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಿಸರ್ಜಿಸುವುದಕ್ಕೆ ಮುಂಚೆ ಮೂರ್ತಿಗಳಿಗೆ ಪೂಜೆ ಮಾಡಲು ಉಪಯೋಗಿಸಿದ ಹೂವು, ವಸ್ತ್ರ, ಅಲಂಕಾರ ಸಾಮಾಗ್ರಿಗಳನ್ನು (ಪೇಪರ್ ಮತ್ತು ಪ್ಲಾಸ್ಟಿಕ್‌ನಲ್ಲಿ ಮಾಡಿದಂತಹ) ತೆಗೆದಿಡಬೇಕು. ಜೈವಿಕ ಕ್ರಿಯೆಗೆ ಒಳಪಡುವ ಸಾಮಾಗ್ರಿಗಳನ್ನು ಪ್ರತ್ಯೇಕಿಸಿ, ಪುನರ್‌ಬಳಕೆ ಅಥವಾ ಕಾಂಪೋಸ್ಟ್‌ಗೆ ಬಳಸಬೇಕು. ಜೈವಿಕ ಕ್ರಿಯೆಗೆ ಒಳಪಡದ ತ್ಯಾಜ್ಯವನ್ನು ಪ್ರತ್ಯೇಕಿಸಿ, ವಿಲೇವಾರಿ ಸ್ಥಳಗಳಿಗೆ ನೀಡಬೇಕು.

ಸಾಧ್ಯವಾದಷ್ಟು ಮನೆಯಲ್ಲಿ ಬಕೆಟ್‌ಗಳಲ್ಲಿ ವಿಸರ್ಜಿಸಿ, ನಂತರ ಗಿಡಗಳಿಗೆ ವಿಸರ್ಜಿಸಬೇಕು. ಮೂರ್ತಿ ವಿಸರ್ಜಿಸುವ ಸ್ಥಳಗಳಲ್ಲಿ ಯಾವುದೇ ವಸ್ತುಗಳನ್ನು ಸುಡಬಾರದು. ಜಲಮೂಲಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಮೂರ್ತಿ ವಿಸರ್ಜನೆ ಮಾಡಬೇಕು.

ನೀರು ಜೀವಕ್ಕೆ ಒಂದು ಅಮೂಲ್ಯವಾದ ಸಂಪನ್ಮೂಲ. ಇದನ್ನು ಉಳಿಸಿ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ಮೇಲಿನ ಅಂಶಗಳ ಬಗ್ಗೆ ಗಮನಕೊಟ್ಟು ನಾಗರಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಆನಂದ ಕಲ್ಲೋಳಿಕರ್ ಪ್ರಕಟಣೆ ಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News