ಉಡುಪಿ : ನಗರ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆ

Update: 2019-08-17 15:05 GMT

ಉಡುಪಿ, ಆ.17: ಉಡುಪಿ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಾದ ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ, ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ನಗರ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆ ಮತ್ತು ಗುರುತು ಚೀಟಿ ವಿತರಣೆ ಕಾರ್ಯವನ್ನು ಡೇ-ನಲ್ಮ್ ಯೋಜನೆಯಡಿ ನಡೆಸಲು ಉದ್ದೇಶಿಸಲಾಗಿದೆ.

ಇದರಲ್ಲಿ ಸಂಬಂಧಪಟ್ಟ ಬೀದಿ ವ್ಯಾಪಾರಸ್ಥರ ಸಮೀಕ್ಷೆ ಮತ್ತು ಅವರಿಗೆ ಗುರುತಿನ ಚೀಟಿ ವಿತರಿಸುವುದು ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ನಗರದ ಪ್ರತಿಯೊಂದು ಬೀದಿ ಬದಿ ವ್ಯಾಪಾರಸ್ಥರು ತಮ್ಮ ಬಳಿ ಇರುವ ಸಂಬಂಧಪಟ್ಟ ದಾಖಲೆಗಳನ್ನು ಅಂದರೆ ಅರ್ಜಿದಾರರ ಖಾಯಂ/ಪ್ರಸ್ತುತ ವಾಸಿಸುತ್ತಿರುವ ವಿಳಾಸದ ಗುರುತಿನ ಚೀಟಿ, ಪಡಿತರ ಚೀಟಿ, ಮತದಾನ ಚೀಟಿ, ಆಧಾರ್ ಕಾರ್ಡ್ ಇತ್ಯಾದಿಗಳ ಒಂದು ಪ್ರತಿ, ವ್ಯಾಪಾರದ ಅರ್ಜಿದಾರ ಮತ್ತು ವಾರಸುದಾರರಜೊತೆಗಿನ ಗುಂಪು ಭಾವಚಿತ್ರ, ಮೊಬೈಲ್ ಸಂಖ್ಯೆಯನ್ನು ತಮ್ಮೆಂದಿಗೆ ಇರಿಸಿಕೊಳ್ಳಬೇಕು.

ಸಮೀಕ್ಷೆಗೆ ಸಂಬಂಧಪಟ್ಟ ಸಮೀಕ್ಷಾದಾರ ಸಂಸ್ಥೆಯಾದ ಆರ್ಯ ಪ್ರತಿಷ್ಠಾನದ ಸಿಬ್ಬಂದಿ/ ಪ್ರತಿನಿಧಿ ಬೀದಿ ವ್ಯಾಪಾರಸ್ಥರ ಬಳಿ ಬಂದಾಗ ಮೇಲ್ಪಟ್ಟ ದಾಖಲೆ ಗಳನ್ನು ಪರಿಶೀಲಿಸುವರು. ಸಮೀಕ್ಷೆಯ ನಂತರ ಗುರುತಿಸಲ್ಪಟ್ಟ ಅರ್ಹ ಬೀದಿ ವ್ಯಾಪಾರಸ್ಥರಿಗೆ ಗುರುತು ಪತ್ರ ವಿತರಿಸಲಾಗುವುದು. ಹೀಗಾಗಿ ಅರ್ಜಿದಾರರು ಸಂಬಂಧಪಟ್ಟ ದಾಖಲೆಗಳ ಒಂದು ಪ್ರತಿಯನ್ನು ತಮ್ಮಲ್ಲಿಟ್ಟುಕೊಂಡಿದ್ದು, ಸಂದರ್ಶಿಸಿದ ಸಮೀಕ್ಷೆದಾರರಿಗೆ ಕೊಟ್ಟು ಸಹಕರಿಸಬೇಕು.

ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ಆಗಸ್ಟ್ ತಿಂಗಳ ಎರಡನೆಯ ವಾರದಿಂದ ಸೆಪ್ಟಂಬರ್ ಎರಡನೇ ವಾರದ ಅವಧಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಬೀದಿ ವ್ಯಾಪಾರಸ್ಥರು ಈ ಸಮೀಕ್ಷೆಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9901481729 ಅಥವಾ 9945783450ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News