ದಿಡುಪೆ-ಕುಕ್ಕಾವು ಸೇತುವೆ ದುರಸ್ತಿ: ವಾಹನ ಸಂಚಾರ ಮುಕ್ತ

Update: 2019-08-17 15:41 GMT

ಬೆಳ್ತಂಗಡಿ : ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ದಿಡುಪೆ, ಕುಕ್ಕಾವು ಸೇತುವೆಯ ಸಂಪರ್ಕ ರಸ್ತೆಗಳು ಸಂಪೂರ್ಣ ಕುಸಿದು ಸಂಪರ್ಕ ಕಡಿತಗೊಂಡಿತ್ತು. ಇದೀಗ ಸಮರೋಪಾದಿಯಲ್ಲಿ ಕೆಲಸಗಳು ನಡೆದು ಕುಕ್ಕಾವು ಸೇತುವೆಯ ದುರಸ್ತಿಗೊಳಿಸಿ ಶುಕ್ರವಾರದಿಂದಲೇ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸೋಮಂತಡ್ಕ ಕಾಜೂರು--ದಿಡುಪೆ ಸಂಪರ್ಕಿಸುವ ಕುಕ್ಕಾವು ಸೇತುವೆಯ ಸಂಪರ್ಕವನ್ನು ಕಡಿತಗೊಳಿಸಿ ಈ ಪ್ರವಾಹ ಹರಿದಿದೆ. ಇದರಿಂದ ಎರಡು ಕಡೆಯವರು ಸಂಪರ್ಕವನ್ನೇ ಕಡಿದುಕೊಂಡಿದ್ದರು. ಪ್ರವಾಹದ ತೀವ್ರತೆ ಕಡಿಮೆ ಆದ ತಕ್ಷಣ ಇದರ ದುರಸ್ತಿ ಕಾರ್ಯ ನಡೆದಿದೆ.

ಸಾವಿರಾರು ಮಂದಿ ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ನದಿಯಿಂದ ಬೃಹತ್ ಮರ, ಮಣ್ಣು, ಕಲ್ಲು ತೆರವುಗೊಳಿಸಿ ನೀರಿನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕುಸಿದು ಹೋದ ಕುಕ್ಕಾವು ಸೇತುವೆ ತಳಭಾಗಕ್ಕೆ ಪೈಪ್ ಅಳವಡಿಸಿ ಜೆಸಿಬಿ ಮೂಲಕ ಮಣ್ಣು ತುಂಬಿ ವಾಹನಗಳ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ.

ದಿಡುಪೆ ವ್ಯಾಪ್ತಿಯ ನದಿಗಳಲ್ಲಿ ಸಿಕ್ಕಿಹಾಕಿಕಂಡಿದ್ದ ಬೃಹತ್ ಮರ, ಬಂಡೆಗಳನ್ನು ಸುಮಾರು 15 ಜೆಸಿಬಿಗಳಿಂದ ತೆರವು ಕಾರ್ಯ ನಡೆಯುತ್ತಿದ್ದು, ಅರಣ್ಯ ಇಲಾಖಾ ಸಿಬ್ಬಂದಿ ಇದರ ಸಂಪೂರ್ಣ ನೇತೃತ್ವ ವಹಿಸಿಕೊಂಡಿದ್ದಾರೆ. ದಿಡುಪೆಯ ದರ್ದಕಂಡ ಎಂಬಲ್ಲಿ ನೀರಿನ ರಬಸಕ್ಕೆ 500ಮೀ. ಉದ್ದದಲ್ಲಿ ಹೊಸ ನದಿಯೇ ಸೃಷ್ಠಿಯಾಗಿ 70ಕ್ಕೂ ಬೃಹತ್ ಮರಗಳು ಸೇತುವೆ ಹಾಗೂ ದರ್ದಕಂಡ ಸುಂದರ ಎಂಬವರ ತೋಟದಲ್ಲಿ ರಾಶಿ ಬಿದ್ದಿವೆ. ಅರಣ್ಯ ಇಲಾಖೆಯಿಂದ ಈ ಮರಗಳನ್ನು ಶನಿವಾರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News