ಅಯೋಧ್ಯೆಯಲ್ಲಿ ಸೌಹಾರ್ದ ಕಾರ್ಯಕ್ರಮ ನಡೆಸಲು ತೆರಳುತ್ತಿದ್ದವರನ್ನು ಬಂಧಿಸಿದ ಉ.ಪ್ರದೇಶ ಪೊಲೀಸರು !

Update: 2019-08-17 15:56 GMT

ಹೊಸದಿಲ್ಲಿ, ಆ. 17: ಶಾಂತಿ ಹಾಗೂ ಕೋಮು ಸಾಮರಸ್ಯಕ್ಕಾಗಿ ಕಾರ್ಯಾಗಾರ ನಡೆಸಲು ಅಯೋಧ್ಯೆಯತ್ತ ತೆರಳುತ್ತಿದ್ದ ಸಾಮಾಜಿಕ ಹೋರಾಟಗಾರರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕ ಹಾಗೂ ಸಾಮಾಜಿಕ ಹೋರಾಟಗಾರ ರಾಮ್ ಪುನಿಯಾನಿ, ರಾಜ್ಯದಲ್ಲಿರುವ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಕೋಮು ಸಾಮರಸ್ಯ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಆದುದರಿಂದಲೇ ಈ ಕ್ರಮ ತೆಗೆದುಕೊಂಡಿದೆ ಎಂದಿದ್ದಾರೆ.

 ಮಹಾಂತ ಯುಗಲ್ ಕಿಶೋರ್ ಶರಣ್ ಶಾಸ್ತ್ರಿ ಮುಖ್ಯ ಅರ್ಚಕರಾಗಿರುವ ಅಯೋಧ್ಯೆಯ ಸರಯೂ ಕುಂಜ್ ದೇವಾಲಯದಲ್ಲಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು. 1930ರಲ್ಲಿ ಖಾನ್ ಅಬ್ದುಲ್ ಗಫರ್ ಖಾನ್ ವಸಾಹತುಶಾಹಿ ವಿರುದ್ಧ ನಡೆಸಿದ್ದ ‘ಖುದಾಯಿ ಖಿದ್‌ಮತಗಾರ್’ ಚಳವಳಿಯನ್ನು ಪುನರುಜ್ಜೀವನಗೊಳಿಸಿರುವ ಫೈಝಲ್ ಖಾನ್ ಅವರು ಮ್ಯಾಗ್ಸೆಸೆ ಪ್ರಶಸ್ತಿ ಗೌರವಾನ್ವಿತರಾದ ಸಂದೀಪ್ ಪಾಂಡೆ ಹಾಗೂ ಮಹಾಂತ್ ಶಾಸ್ತ್ರಿ ಅವರೊಂದಿಗೆ ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದರು. ಇಂದು ನಡೆಯಲಿದ್ದ ಕಾರ್ಯಾಗಾರದಲ್ಲಿ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮ ಪುನಿಯಾನಿ ಪ್ರಾಸ್ತಾವಿಕ ಭಾಷಣ ಮಾಡಬೇಕಾಗಿತ್ತು.

‘‘ಬೆಳಗ್ಗೆ 4 ಗಂಟೆಗೆ ಸಂದೀಪ್ ಪಾಂಡೆ ಅವರ ನಿವಾಸಕ್ಕೆ ಪೊಲೀಸರು ಆಗಮಿಸಿದರು. ಕೆಲವು ಸ್ವಯಂ ಸೇವಕರೊಂದಿಗೆ ನಾನು ಮತ್ತ ಪಾಂಡೆ ಅಯೋಧ್ಯೆಗೆ ಹೊರಟಿದ್ದೆವು. ಕಾರ್ಯಾಗಾರ ಸ್ಥಗಿತಗೊಳಿಸಲಾಗಿದೆ. ಆದುದರಿಂದ ಪ್ರಯಾಣ ರದ್ದುಗೊಳಿಸುವಂತೆ ಅವರು ನಮಗೆ ತಿಳಿಸಿದರು’’ ಎಂದು ರಾಮ್ ಪುನಿಯಾನಿ ತಿಳಿಸಿದ್ದಾರೆ. ಶಾಂತಿ ಹಾಗೂ ಕೋಮು ಸೌಹಾರ್ದಕ್ಕಾಗಿ ಈ ಕಾರ್ಯಾಗಾರ ನಡೆಯುತ್ತಿದೆ. ಆದುದರಿಂದ ನಾವು ಕಾರ್ಯಕ್ರಮ ನಡೆಸುತ್ತೇವೆ ಎಂದು ಸಂದೀಪ್ ಪಾಂಡೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ಅನಂತರ ಅವರು ತೆರಳಿದರು. ಪೊಲೀಸರು ಅಯೋಧ್ಯೆಗೆ 10 ಕಿ.ಮೀ. ಮುನ್ನ ಸಿಗುವ “ಟೋಲ್ ಬೂತ್‌ನ ವರೆಗೆ ಎರಡು ಕಾರನ್ನು ಹಿಂಬಾಲಿಸಿದರು ಎಂದು ಮೂಲಗಳು ತಿಳಿಸಿವೆ. ಟೋಲ್ ಬೂತ್‌ನಲ್ಲಿ 30ರಿಂದ 40 ಪೊಲೀಸರು ಕಾಯುತ್ತಿದ್ದರು. ಲಿಖಿತ ಆದೇಶ ಇಲ್ಲದೆ, ನಮ್ಮನ್ನು ತಡೆಯಲು ಕಾರಣ ಏನು” ಎಂದು ಪಾಂಡೆ ಪ್ರಶ್ನಿಸಿದರು ಅದಕ್ಕೆ ಪೊಲೀಸರು, ಕಾರ್ಯಕ್ರಮದಿಂದ ಶಾಂತಿ ಕದಡುವ ಸಾಧ್ಯತೆ ಇದೆ. ಆದುದರಿಂದ ಪ್ರಯಾಣ ಮುಂದುವರಿಸಬಾರದು ಎಂದರು. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಅಯೋಧ್ಯೆಗೆ ಬಂದಿರುವುದು ಅಲ್ಲ. ಶಾಂತಿ, ಕೋಮ ಸಾಮರಸ್ಯ, ಸಂವಿಧಾನದ ಬಗ್ಗೆ ಕಾರ್ಯಾಗಾರ ನಡೆಸಲು ಬಂದಿರುವುದು ಎಂದು ಪಾಂಡೆ ಹೇಳಿದರು. ಆದರೆ, ಪೊಲೀಸರು ಮುಂದುವರಿಯಲು ಅವಕಾಶ ನೀಡಲಿಲಲ್ಲ ಎಂದು ಅವರು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News