ಲೋಕಸಭಾ ಚುನಾವಣೆ: ಮತ ಎಣಿಕೆಯಲ್ಲಿ ಲೋಪ ಸಂಭವಿಸಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಗಂಗ್ವಾರ್

Update: 2019-08-17 17:07 GMT

ಹೊಸದಿಲ್ಲಿ, ಆ.17: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಇವಿಎಂ ಮತ ಎಣಿಕೆ ಸಂದರ್ಭ ಲೋಪ ಸಂಭವಿಸಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಆರೋಪಿಸಿದ್ದು, ಈ ಬಗ್ಗೆ ಬರೇಲಿ ಲೋಕಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. 

ಸಂತೋಷ್ ಗಂಗ್ವಾರ್ ಅವರು ಮೋದಿ ಸಂಪುಟದ ಪ್ರಮುಖ ಸಚಿವರಲ್ಲೋರ್ವರಾಗಿದ್ದು, ಕೇಂದ್ರ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಬೂತ್ ಆಗಿರುವ ಕಲಿ ಬರಿಯಲ್ಲಿ ನಿರೀಕ್ಷಿತ ಮತಗಳು ತನಗೆ ಲಭಿಸಿಲ್ಲ ಎಂದು ಗಂಗ್ವಾರ್ ಆರೋಪಿಸಿದ್ದಾರೆ. 

2009ನ್ನು ಹೊರತುಪಡಿಸಿ 1989ರಿಂದ ಗಂಗ್ವಾರ್ ಬರೇಲಿಯಲ್ಲಿ ಜಯ ಗಳಿಸುತ್ತಲೇ ಬಂದಿದ್ದಾರೆ. ಆಗಸ್ಟ್ 14ರಂದು ಗಂಗ್ವಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರೇಂದ್ರ ಕುಮಾರ್ ಸಿಂಗ್ ರಿಗೆ ದೂರು ಸಲ್ಲಿಸಿದ್ದಾರೆ. 

ಕಲಿ ಬರಿಯಲ್ಲಿರುವ ಬೂತ್ ನಂಬರ್ 290ರಲ್ಲಿ ಬಿಜೆಪಿ ಕೇವಲ 5 ಮತಗಳನ್ನು ಮಾತ್ರ ಗಳಿಸಿದೆ. ಆದರೆ ಕಾಂಗ್ರೆಸ್ 29 ಮತ್ತು ಸಮಾಜವಾದಿ ಪಕ್ಷವು 583 ಮತಗಳನ್ನು ಗಳಿಸಿದೆ. ಮತ ಎಣಿಕೆಯಲ್ಲಿ ಲೋಪವಾಗಿರಬೇಕು. ಈ ಹಿನ್ನೆಲೆಯಲ್ಲಿ ತನಿಖೆ ನಡೆಯಬೇಕು ಎಂದು ಗಂಗ್ವಾರ್ ದೂರಿನಲ್ಲಿ ತಿಳಿಸಿದ್ದಾರೆ.

“ಈ ಬೂತ್ ನಲ್ಲಿ ಎಂದಿಗೂ ಬಿಜೆಪಿಯೇ ಮೇಲುಗೈ ಸಾಧಿಸುತ್ತಿತ್ತು. ಆದರೆ ಈ ಬಾರಿ ಚಿತ್ರಣವೇ ಬದಲಾಗಿದೆ” ಎಂದು ಗಂಗ್ವಾರ್ ಅವರ ಆಪ್ತ ರಮೇಶ್ ಚಂದ್ ಜೈನ್ ತಿಳಿಸಿದ್ದಾರೆ. 

ಇದೇ ವೇಳೆ ಬಿಜೆಪಿ ಎದುರಾಳಿ ಸಮಾಜವಾದಿ ಪಕ್ಷವು ಇವಿಎಂ ದೋಷವೇ ಇದಕ್ಕೆಲ್ಲಾ ಕಾರಣ ಎಂದಿದೆ. ಈಗಾಗಲೇ ಇವಿಎಂ ಬಗ್ಗೆ ಪ್ರಶ್ನೆಗಳನ್ನೆತ್ತಲಾಗಿದೆ ಎಂದು ಅದು ತಿಳಿಸಿದೆ. ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಪದೇಪದೇ ಪ್ರಶ್ನೆಗಳು ಉದ್ಭವಿಸುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ಮುಂದೆ ಬರಲಿರುವ ಎಲ್ಲಾ ಚುನಾವಣೆಗಳು ಬ್ಯಾಲೆಟ್ ಪೇಪರ್ ಗಳಲ್ಲಿ ನಡೆಯಬೇಕು ಎಂದು ಎಸ್ಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಐ.ಪಿ. ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News