ಜೇಟ್ಲಿ ಆರೋಗ್ಯ ಸ್ಥಿತಿ ಸ್ಥಿರ

Update: 2019-08-17 17:00 GMT

ಹೊಸದಿಲ್ಲಿ, ಆ. 17: ಏಮ್ಸ್‌ನಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಅಳವಡಿಸಲಾಗಿದ್ದ ಜೀವರಕ್ಷಕ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. 66ರ ಹರೆಯದ ಅರುಣ್ ಜೇಟ್ಲಿ ಅವರನ್ನು ಆಗಸ್ಟ್ 9ರಂದು ಏಮ್ಸ್‌ನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಜೀವರಕ್ಷಕ ವ್ಯವಸ್ಥೆ ಅಳವಡಿಸಲಾಗಿದೆ. ತಜ್ಞ ವೈದ್ಯರ ಗುಂಪು ಅವರ ದೇಹ ಸ್ಥಿತಿ ಬಗ್ಗೆ ನಿಗಾ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೇಟ್ಲಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಏಮ್ಸ್ ಆಗಸ್ಟ್ 10ರ ನಂತರ ಯಾವುದೇ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ಪೀಯೂಷ್ ಗೋಯಲ್, ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಬಿಜೆಪಿಯ ಸತೀಶ್ ಉಪಾದ್ಯಾಯ, ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ, ಜ್ಯೋತಿರಾದಿತ್ಯ ಸಿಂಧ್ಯ, ಬಿಎಸ್ಪಿ ವರಿಷ್ಠೆ ಮಾಯಾವತಿ ಹಾಗೂ ವಾಯು ಪಡೆಯ ಏರ್ ಚೀಫ್ ಬೀರೇಂದರ್ ಸಿಂಗ್ ಧಾನೋವ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಅರುಣ್ ಜೇಟ್ಲಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಅರುಣ್ ಜೇಟ್ಲಿ ಅವರ ಆರೋಗ್ಯ ವಿಚಾರಿಸಿದ್ದರು. ಉಸಿರಾಟದ ತೊಂದರೆ, ಹಾಗೂ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಅರುಣ್ ಜೇಟ್ಲಿ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಈ ವರ್ಷ ಮೇಯಲ್ಲಿ ಕೂಡ ಅವರನ್ನು ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News