ಮಧ್ಯಪ್ರದೇಶ: ನೆರೆಹಾವಳಿಗೆ 70 ಮಂದಿ ಬಲಿ

Update: 2019-08-17 17:25 GMT

ಭೋಪಾಲ, ಆ.17: ಮಧ್ಯಪ್ರದೇಶದ ಪಶ್ಚಿಮದ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ನೆರೆಹಾವಳಿ ತೀವ್ರಗೊಂಡಿದ್ದು, ರಾಜ್ಯದಲ್ಲಿ ಮಳೆ ಮತ್ತು ನೆರೆಹಾವಳಿಯಿಂದ ಇದುವರೆಗೆ ಒಟ್ಟು 70 ಜನ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮೃತಪಟ್ಟವರಲ್ಲಿ 15 ಮಂದಿ ಸಿಡಿಲಿನ ಆಘಾತದಿಂದ ಸಾವನ್ನಪ್ಪಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಿವಿ ರಶ್ಮಿ ಹೇಳಿದ್ದಾರೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿದ್ದು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಖಾಂಡ್ವ ಜಿಲ್ಲೆಯ ಇಂದಿರಾ ಸಾಗರ್ ಅಣೆಕಟ್ಟು ಸೇರಿದಂತೆ ಆರು ದೊಡ್ಡ ಮತ್ತು ಮಧ್ಯಮ ಜಲಾಶಯಗಳ ಗೇಟ್ ತೆರೆದು ನೀರನ್ನು ಹೊರಬಿಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಮಲೇಶ್ ರಾಯ್‌ಕ್ವರ್ ಹೇಳಿದ್ದಾರೆ.

 ಶುಕ್ರವಾರ ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದವರು ಶಿವ್‌ಪುರಿ ಗ್ರಾಮದಲ್ಲಿ ನೆರೆನೀರಿನಲ್ಲಿ ಸಿಕ್ಕಿಕೊಂಡಿದ್ದ 17 ಮಕ್ಕಳ ಸಹಿತ 117 ಗ್ರಾಮಸ್ಥರನ್ನು ರಕ್ಷಿಸಿದ್ದಾರೆ. ನೆರೆನೀರಿನಲ್ಲಿ ಕೊಚ್ಚಿಹೋಗಿದ್ದ ಇಬ್ಬರು ಶಿಕ್ಷಕರು ಹಾಗೂ ಅವರ ಕಾರು ಚಾಲಕನ ಮೃತದೇಹ ಮಹೀದ್‌ಪುರದ ಬಳಿ ಪತ್ತೆಯಾಗಿದೆ. ನೆರೆ ಹಾವಳಿಯಿಂದ 4,298 ಜನರನ್ನು ಸ್ಥಳಾಂತರಿಸಲಾಗಿದ್ದು 214 ಜಾನುವಾರುಗಳು ಮೃತಪಟ್ಟಿವೆ. 2,368 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News