‘ಕಾಫಿಡೇ’ ಒಟ್ಟು ಸಾಲ 4,970 ಕೋಟಿ ರೂ.: ಸಂಸ್ಥೆಯ ಸ್ಪಷ್ಟನೆ

Update: 2019-08-17 17:54 GMT

ಬೆಂಗಳೂರು, ಆ.17: ಕಾಫಿ ಡೇ ಸಮೂಹಸಂಸ್ಥೆಗಳ ಒಟ್ಟು ಸಾಲದ ಮೊತ್ತ 4,970 ಕೋಟಿ ರೂ. ಆಗಿದ್ದು ಎಲ್ಲಾ ಬಾಧ್ಯತೆಗಳನ್ನೂ ಗೌರವಿಸಿ ಸಾಲ ಮರು ಪಾವತಿಸಲಾಗುವುದು ಎಂದು ಕಾಫಿಡೇ ಎಂಟರ್‌ಪ್ರೈಸಸ್ ಸ್ಪಷ್ಟಪಡಿಸಿದೆ.

 ಒಟ್ಟು ಸಾಲದಲ್ಲಿ 4,796 ಕೋಟಿ ರೂ. ಮೊತ್ತದ ಅಸುರಕ್ಷಿತ ಸಾಲ(ಅನ್‌ಸೆಕ್ಯೂರ್ಡ್‌ ಲೋನ್), ಉಳಿದ 174 ಕೋಟಿ ರೂ. ಸುರಕ್ಷಿತ ಸಾಲವಾಗಿದೆ. ಅಲ್ಲದೆ ಅಂಗಸಂಸ್ಥೆ ಟ್ಯಾಂಗ್ಲಿನ್ ಡೆವಲಪ್‌ಮೆಂಟ್ ಲಿ. ಹೊಂದಿರುವ ಗ್ಲೋಬಲ್ ವಿಲೇಜ್ ಟೆಕ್‌ಪಾರ್ಕ್ ಮಾರಾಟದಿಂದ ಸುಮಾರು 2,600 ಕೋಟಿಯಿಂದ 3,000 ಕೋಟಿ ರೂ. ಪಡೆಯುವುದಾಗಿ ಈಗಾಗಲೇ ಘೋಷಿಸಲಾಗಿದೆ. ಈ ಹಣ ಕೈಸೇರಿದರೆ ಸಂಸ್ಥೆಯ ಸಾಲದ ಮೊತ್ತ 2,400 ಕೋಟಿ ರೂ.ಗೆ ಇಳಿಯಲಿದೆ ಎಂದು ಸಂಸ್ಥೆಯ ದಾಖಲೆ ಪತ್ರದಲ್ಲಿ ತಿಳಿಸಲಾಗಿದೆ.

ಸಿಕಾಲ್ ಲಾಜಿಸ್ಟಿಕ್ಸ್ ಆ್ಯಂಡ್ ಮ್ಯಾಗ್ನಾಸಾಫ್ಟ್ ಕನ್ಸಲ್ಟಿಂಗ್ ಅನ್ನು ಹೊರತುಪಡಿಸಿದರೆ ಕಾಫಿಡೇ ಸಮೂಹದ ಸಾಲ ಮುಂದಿನ 45 ದಿನದಲ್ಲಿ (ಗ್ಲೋಬಲ್ ವಿಲೇಜ್ ಟೆಕ್‌ಪಾರ್ಕ್ ಮಾರಾಟದ ಬಳಿಕ) ಸುಮಾರು 1000 ಕೋಟಿ ರೂ.ಗೆ ಇಳಿಯಲಿದೆ. ಸಾಲದ ಹೊರೆ ಇಳಿಕೆಯಾದ ಬಳಿಕ ಸಂಸ್ಥೆ ಇನ್ನಷ್ಟು ಸುಗಮವಾಗಿ ಕಾರ್ಯ ನಿರ್ವಹಿಸುವ ಭರವಸೆಯಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೆ ಸಿಕಾಲ್ ಸಂಸ್ಥೆಯ ಹೂಡಿಕೆಯಲ್ಲೂ ಸ್ವಲ್ಪ ಮಟ್ಟಿನ ಹಿಂದೆಗೆತಕ್ಕೆ ಪ್ರಯತ್ನ ಸಾಗುತ್ತಿದ್ದು ಇದು ಸಾಧ್ಯವಾದರೆ ಸಿಕಾಲ್‌ನ ಸಾಲದ ಹೊರೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಹಾಗೂ ಆಸ್ತಿಯ ಮೂಲವು ಇಡೀ ಸಮೂಹಸಂಸ್ಥೆಗಳ ಸಾಲದ ಹೊರೆಯನ್ನು ಸಂಪೂರ್ಣ ಇಳಿಸಲು ಸಾಕಾಗುತ್ತದೆ ಎಂದು ತಿಳಿಸಲಾಗಿದೆ.

ಸಾಲದ ಬಾಧ್ಯತೆ ಗೌರವಿಸಲು ಸಾಕಷ್ಟು ಸಮಯ ಒದಗಿಸಬೇಕೆಂದು ಸಾಲಗಾರರಲ್ಲಿ ಕೋರುತ್ತಿದ್ದೇವೆ. ಅಲ್ಲದೆ ಸಂಸ್ಥೆಯ ಮೇಲೆ ವಿಶ್ವಾಸ ಇರಿಸಿರುವುದಕ್ಕಾಗಿ ಸಂಸ್ಥೆಯಿಂದ ನೇರ ಅಥವಾ ಪರೋಕ್ಷವಾಗಿ ಉದ್ಯೋಗ ಪಡೆದಿರುವ ಸುಮಾರು 50000 ಉದ್ಯೋಗಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಸಂಸ್ಥೆಯ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News