ಕೊಪ್ಪಳ: ವಿದ್ಯುತ್ ಸ್ಪರ್ಶಿಸಿ ಐವರು ಹಾಸ್ಟೆಲ್ ವಿದ್ಯಾರ್ಥಿಗಳು ಮೃತ್ಯು

Update: 2019-08-18 12:15 GMT

ಕೊಪ್ಪಳ/ಬೆಂಗಳೂರು, ಆ.18: ಧ್ವಜ ಸ್ತಂಭ ತೆರವು ಸಂದರ್ಭದಲ್ಲಿ 11 ಕೆ.ಬಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಸತಿ ನಿಲಯದ ವಿದ್ಯಾರ್ಥಿಗಳಾದ ಮೆತಗಲ್ ಗ್ರಾಮದ ಮಲ್ಲಿಕಾರ್ಜುನ (10ನೆ ತರಗತಿ), ಲಿಂಗದಳ್ಳಿ ಗ್ರಾಮದ ಬಸವರಾಜ, (9ನೆ ತರಗತಿ), ವಿದ್ಯಾರ್ಥಿಗಳಾದ ಹಲಗೇರಿ ಗ್ರಾಮದ ದೇವರಾಜ, ಹೈದರ್ ನಗರದ ಕುಮಾರ ಹಾಗೂ ಲಾಚನಕೇರಿ ಗ್ರಾಮದ ಗಣೇಶ (8ನೆ ತರಗತಿ) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾಎರ.

ನಗರದ ಬನ್ನಿಕಟ್ಟಿ ಪ್ರದೇಶದ ರಾಘವೇಂದ್ರ ಮಠದ ಪಕ್ಕದಲ್ಲಿರುವ ಹಿಂದುಳಿದ ವರ್ಗಗಳ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದ ಧ್ವಜ ಸ್ತಂಭ ತೆರವು ಗೊಳಿಸುತ್ತಿರುವಾಗ ರವಿವಾರ ಬೆಳಗ್ಗೆ 7:45ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ವೇಳೆ ಒಂದು ಕಬ್ಬಿಣದ ಸ್ತಂಭ(ಪೈಪ್) ನೆಟ್ಟು ಧ್ವಜಾರೋಹಣ ಮಾಡಿದ್ದರು. ಬಳಿಕ ಧ್ವಜವನ್ನು ಕೆಳಗೆ ಇಳಿಸಿ, ಸ್ತಂಭ ಹಾಗೆ, ಬಿಟ್ಟು ರವಿವಾರ ತೆರವುಗೊಳಿಸಲು ಮೊದಲು ಒಬ್ಬ ವಿದ್ಯಾರ್ಥಿ ಹೋಗಿದ್ದ ವೇಳೆ, ದಿಢೀರ್ ವಿದ್ಯುತ್ ತಂತಿ ಸ್ಪರ್ಶಿಸಿ ಆಘಾತವಾಗಿ ಕುಸಿದುಬಿದ್ದಿದ್ದಾನೆ. ಅವನನ್ನು ಕಾಪಾಡಲು ಹೋಗಿ ಉಳಿದ ನಾಲ್ಕು ವಿದ್ಯಾರ್ಥಿಗಳಿಗೂ ವಿದ್ಯುತ್ ಸ್ಪರ್ಶವಾಗಿ ಆಘಾತವಾಗಿ ಕೂಡಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನಿರ್ಲಕ್ಷ್ಯ: ವಿದ್ಯಾರ್ಥಿಗಳ ಸಾವಿಗೆ ವಸತಿ ನಿಲಯದ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಕಟ್ಟಡ ಮಾಲಕ ಹಾಗೂ ವಾರ್ಡನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳಾಂತರ: ವಸತಿ ನಿಲಯದ ಪಕ್ಕದಲ್ಲಿರುವ ವಿಜಯನಗರ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗೆ ಮಕ್ಕಳನ್ನು ಸ್ಥಳಾಂತರಿಸಲಾಯಿತು. ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಘಟನೆಯಿಂದ ಗಾಬರಿಗೊಂಡಿದ್ದ ಮಕ್ಕಳನ್ನು ಬಡಾವಣೆಯ ನಿವಾಸಿಗಳು ಸಂತೈಸಿದರು.

ಜಿಲ್ಲಾಧಿಕಾರಿ ಭೇಟಿ: ಸ್ಥಳಕ್ಕೆ ಡಿಸಿ ಪಿ.ಸುನೀಲ್ ಕುಮಾರ್ ಭೇಟಿ ನೀಡಿ ವಸತಿ ನಿಲಯದ ಸಿಬ್ಬಂದಿ ಹಾಗೂ ಪೊಲೀಸರಿಂದ ಮಾಹಿತಿ ಪಡೆದರು. ಜೆಸ್ಕಾಂ ಮತ್ತು ವಸತಿ ನಿಲಯದ ಸಿಬ್ಬಂದಿ ನಿರ್ಲಕ್ಷ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಪ್ರಕರಣ ಸಂಬಂಧ ಎಸ್ಪಿ ರೇಣುಕಾ ಸುಕುಮಾರ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ವಸತಿ ನಿಲಯಕ್ಕೆ ಬೀಗ ಹಾಕಿದರು. ಕಟ್ಟಡದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News