ಜೆಎನ್‍ಯುಗೆ ಮೋದಿ ಹೆಸರಿಟ್ಟು ‘ಎಂಎನ್‍ಯು’ ಎಂದು ಮರುನಾಮಕರಣ ಮಾಡಿ: ಬಿಜೆಪಿ ಸಂಸದ ಹಂಸ್ ರಾಜ್

Update: 2019-08-18 07:36 GMT

ಹೊಸದಿಲ್ಲಿ, ಆ.18: ರಾಜಧಾನಿಯಲ್ಲಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ (ಜೆಎನ್‍ಯು) ಪ್ರಧಾನಿ ನರೇಂದ್ರ ಮೋದಿಯ ಹೆಸರು ನೀಡಿ ಎಂಎನ್‍ಯು (ಮೋದಿ ನರೇಂದ್ರ ಯನಿವರ್ಸಿಟಿ)  ಎಂದು ಮರುನಾಮಕರಣಗೊಳಿಸಬೇಕೆಂದು ಹೇಳುವ ಮೂಲಕ ಬಿಜೆಪಿ ಸಂಸದ ಹಂಸ್ ರಾಜ್ ಹಂಸ್ ವಿವಾದಕ್ಕೀಡಾಗಿದ್ದಾರೆ.

ವಾಯುವ್ಯ ದೆಹಲಿ ಕ್ಷೇತ್ರದ ಸಂಸದರಾಗಿರುವ  ಹಂಸ್  ಜೆಎನ್‍ಯುನಲ್ಲಿ ಎಬಿವಿಪಿ ಆಯೋಜಿಸಿದ್ದ ‘ಏಕ್ ಶಾಮ್ ಶಹೀದೋಂ ಕೆ ನಾಮ್’ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಆಗಮಿಸಿದ್ದ ಸಂದರ್ಭ ತಮ್ಮ ಭಾಷಣದಲ್ಲಿ ಮೇಲಿನಂತೆ ಹೇಳಿದ್ದಾರೆ.
ಕಾಶ್ಮೀರ ವಿಚಾರವೆತ್ತಿ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ ಅವರು ``ನಮ್ಮ ಪೂರ್ವಜರು ಮಾಡಿದ ತಪ್ಪುಗಳಿಂದಾಗಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ,'' ಎಂದರು.

``ನಾವೆಲ್ಲರೂ ಶಾಂತಿಯಿಂದಿರುವಂತಾಗಲು ಹಾಗೂ ಎಲ್ಲಿಯೂ ಬಾಂಬ್ ದಾಳಿ ನಡೆಯದೇ ಇರಲು  ಪ್ರಾರ್ಥಿಸುತ್ತೇನೆ. ಜೆಎನ್‍ಯುವಿಗೆ ಪ್ರಧಾನಿ ಹೆಸರು ನೀಡಿ ಎಂಎನ್‍ಯು ಎಂದು ನಾಮಕರಣಗೊಳಿಸಬೇಕೆಂದು ನಾನು ಹೇಳುತ್ತೇನೆ. ಮೋದೀ ಜಿಯ ಹೆಸರನ್ನು ಯಾವುದಕ್ಕಾದರೂ ನೀಡಬೇಕು'' ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಸಮಾರಂಭದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಂಸದ ಜಮ್ಮು ಕಾಶ್ಮೀರವನ್ನು ಉಲ್ಲೇಖಿಸಿ ಹಿಂದೆ ಜವಾಹರಲಾಲ್ ನೆಹರೂ ತಪ್ಪುಗಳನ್ನು ಮಾಡಿದ್ದರು ಎಂದರು.

``ನಾನು ಇಲ್ಲಿಗೆ ಇದೇ ಮೊದಲ ಬಾರಿ ಆಗಮಿಸಿದ್ದೇನೆ. ಜೆಎನ್‍ಯು ಬಗ್ಗೆ ಬಹಳಷ್ಟು ಕೇಳಿದ್ದೇನೆ. ಮೋದಿ ಸರಕಾರದ ಪ್ರಯತ್ನಗಳಿಂದಾಗಿ ಬದಲಾವಣೆಗಳಾಗಿವೆ. ಪ್ರಧಾನಿ ಮೋದಿ ದೇಶಕ್ಕಾಗಿ  ಬಹಳಷ್ಟು ಮಾಡಿದ್ದಾರೆ'' ಎಂದರು.

ಎಬಿವಿಪಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಂಸ್ ರಾಜ್ ಜತೆ ಪ್ರದರ್ಶನ ನೀಡಿದ ಬಿಜೆಪಿ ಶಾಸಕ ಮನೋಜ್ ತಿವಾರಿ ಮಾತನಾಡಿ ``ಹಿಂದೆ ಇಲ್ಲಿ `ಭಾರತ್ ತೇರೇ ಟುಕ್ಡೆ ಹೋಂಗೆ'' ಎಂಬ ಘೋಷಣೆಗಳು ಕೇಳಿ ಬಂದಿದ್ದರೆ ಈಗ ಇಲ್ಲಿನ ವಿದ್ಯಾರ್ಥಿಗಳು `ವಂದೇ ಮಾತರಂ' `ಭಾರತ್ ಮಾತಾ ಕಿ ಜೈ' ಎನ್ನುತ್ತಿದ್ದಾರೆ ಎಂದರು.

ಹಂಸ್ ರಾಜ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ``ಅವರು ತಮಗೆ ಅನಿಸಿದ್ದನ್ನು ಹೇಳುತ್ತಾರೆ. ಅವರಿಗೆ ಮೋದೀ ಜಿ ಮೇಲಿರುವ ಅಭಿಮಾನದಿಂದ ಹಾಗೆ ಹೇಳಿದ್ದಾರೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News