ಮಂಗಳೂರು: ಸಿಐಟಿಯು ದ.ಕ.ಜಿಲ್ಲಾ ಸಮ್ಮೇಳನಕ್ಕೆ ಚಾಲನೆ

Update: 2019-08-18 10:09 GMT

ಮಂಗಳೂರು, ಆ.18 : ದೇಶದಲ್ಲಿ ಹಲವು ಗಂಭೀರವಾದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿವೆ. ಈ ಸಮಸ್ಯೆಯನ್ನು ಜನರಿಂದ ಮರೆಮಾಚಲು ಕಾಶ್ಮೀರದಂತಹ ವಿಚಾರಗಳನ್ನು ಮುಂದಿಟ್ಟು ವಂಚಿಸಲಾಗುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ನಡೆಸಲಾಗುತ್ತಿದೆ. ಇದು ಜಮ್ಮು ಕಾಶ್ಮೀರದ ವಿಚಾರದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಹೇಳಿದರು.

ಕನಿಷ್ಠ ಕೂಲಿ, ಪಿಂಚಣಿ, ಸಾಮಾಜಿಕ ಭದ್ರತೆ, ಕಾರ್ಮಿಕರ ಹಕ್ಕುಗಳ ರಕ್ಷಣೆ, ಐಕ್ಯತೆ ಮತ್ತು ಸೌಹಾರ್ದ ಪರಂಪರೆಯ ಉಳಿವಿಗಾಗಿ ನಗರದ ಬೋಳಾರದ ಎಸ್.ಕೆ.ಟೈಲ್ ವರ್ಕರ್ಸ್ ಯೂನಿಯನ್ ಕಚೇರಿಯಲ್ಲಿ ರವಿವಾರ ಆರಂಭಗೊಂಡ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ 16ನೇ ದ.ಕ. ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ದೇಶ ಮತ್ತು ವಿದೇಶಿ ಗುತ್ತಿಗೆ ಬಂಡವಾಳಶಾಹಿಗಳಿಗೆ ಹೆಚ್ಚಿನ ಆದ್ಯತೆ ಮತ್ತು ರಿಯಾಯಿತಿ ನೀಡಲಾಗುತ್ತಿದೆ. ಇಂತಹ ಸರಕಾರ ಕಾರ್ಮಿಕರ ಹಿತಕ್ಕೆ ಆದ್ಯತೆ ನೀಡುವುದಿಲ್ಲ. ಹಾಗಾಗಿ ದೇಶದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕಾರ್ಮಿಕರಿಂದ ಮಾತ್ರ ಸಾಧ್ಯ ಎಂದು ಕೆ. ಶಂಕರ್ ನುಡಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಸಾರ್ವಜನಿಕ ಉದ್ದಿಮೆ ಮಾರಾಟ ಮಾಡುವುದು ದೇಶ ವಿರೋಧಿ ಕೃತ್ಯವಾಗಿದೆ. ನಮ್ಮ ಸರಕಾರ ರೈಲ್ವೆ ಖಾಸಗೀಕರಣ ಮಾಡಿ ಬಂಡವಾಳಶಾಹಿಗಳಿಗೆ ಲೂಟಿಗೈಯಲು ಅವಕಾಶ ಮಾಡಿಕೊಡುವ ಮೂಲಕ ದೇಶ ವಿರೋಧಿ ಕೃತ್ಯ ಎಸಗಿದೆ. ಸರಕಾರ ಏಜೆಂಟ್‌ಗಿರಿಯಾಗಿ ಕೆಲಸ ಮಾಡುತ್ತಿವೆ. ಈಗಾಗಲೇ ಸಂವಿಧಾನದ 44 ಕಾನೂನುಗಳನ್ನು ನಾಶ ಮಾಡಿ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಮುಖಂಡ ಕೆ. ಯಾದವ ಶೆಟ್ಟಿ, ಬ್ಯಾಂಕ್ ನೌಕರರ ಸಂಘದ ಮುಖಂಡ ಬಿ.ಎಂ.ಮಾಧವ, ವಿಮಾ ನೌಕರರ ಸಂಘಟನೆಯ ಬಿ.ಎಂ.ದೇವಾಡಿಗ, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ)ನ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ. ಶೆಟ್ಟಿ, ರೈಲ್ವೆ ಯೂನಿಯನ್ನ ಲಕ್ಷ್ಮಣನ್ ಮಾತನಾಡಿದರು.

ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಹಿರಿಯ ಮುಖಂಡರಾದ ಯು.ಬಿ.ಲೋಕಯ್ಯ, ಕೆ.ಆರ್. ಶ್ರೀಯಾನ್, ಜಿಲ್ಲಾ ಮುಖಂಡರಾದ ಯು. ಜಯಂತ ನಾಯ್ಕ್, ಜಯಂತಿ ಬಿ. ಶೆಟ್ಟಿ, ರಾಧಾ ಮೂಡುಬಿದಿರೆ, ರಾಮಣ್ಣ ವಿಟ್ಲ, ವಸಂತ ನಡಾ ಉಪಸ್ಥಿತರಿದ್ದರು. ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News