"ಅಧಿಕಾರಕ್ಕಾಗಿ ಸಂವಿಧಾನದೊಳಗೆ ಮನುವಾದಿ ಸಿದ್ಧಾಂತದ ಹೇರಿಕೆ"

Update: 2019-08-18 11:42 GMT

ಉಡುಪಿ, ಆ.18: ಸ್ವಾತಂತ್ರ ದೊರೆತ ದಿನದಿಂದ ಈವರೆಗೂ ಆಳುವ ವ್ಯವಸ್ಥೆ ಮನುಧರ್ಮ ಶಾಸನ ಹಾಗೂ ಸಿದ್ದಾಂತವನ್ನು ಅಂಬೇಡ್ಕರ್ ಬರೆದ ಸಮಾನತೆಯ ಸಂವಿಧಾನದೊಳಗೆ ತುರುಕಿಸಿ ತನ್ನ ಅಧಿಕಾರವನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಿದೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಟೀಕಿಸಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮೂಡಬೆಟ್ಟು ಶಾಖೆಯ ವತಿಯಿಂದ ಮೂಡಬೆಟ್ಟು ಚೆಂಡ್ಕಳ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾದ ದಲಿತ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.

ಈ ದೇಶದ ಬಹುಸಂಖ್ಯಾತರಲ್ಲಿ ಆತ್ಮಸ್ಥೈರ್ಯ ಹಾಗೂ ಜಾಗೃತಿ ಮೂಡಿಸಿ ಸ್ವಾಭಿಮಾನದಿಂದ ನೈತಿಕವಾಗಿ ಬದುಕಬೇಕಾದ ಸಮಾಜವನ್ನು ಸೃಷ್ಟಿ ಮಾಡುವ ಶಿಕ್ಷಣ ವ್ಯವಸ್ಥೆಯಲ್ಲೂ ಶತಶತಮಾನಗಳಿಂದ ಶೋಷಣೆ ಮಾಡಿರುವ ಮನುವಾದಿ ಮನಸ್ಸುಗಳೇ ತುಂಬಿಕೊಂಡಿವೆ. ಇದರ ಪರಿಣಾಮ ಮನುಧರ್ಮಗಳ ವಿಚಾರವನ್ನೇ ನಾವು ಇಂದು ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದೇವೆ. ಕಸ ತೆಗೆಯುವುದು, ಮಲ ಹೊರುವುದು ಒಂದು ಜನಾಂಗದ ವೃತ್ತಿ ಎಂಬುದಾಗಿ ನಂಬಿಸುವ ಮತ್ತು ಕೆಲಸ ಮಾಡುವಂತೆ ಪ್ರೇರಿಸುವ ಶಿಕ್ಷಣ ವ್ಯವಸ್ಥೆಯನ್ನು ನಮ್ಮಲ್ಲಿ ಸೃಷ್ಠಿಸಲಾಗಿದೆ ಎಂದು ಅವರು ಆರೋಪಿಸಿದರು.

ಸಂವಿಧಾನದ ಆಶಯದಂತೆ ಈ ದೇಶದಲ್ಲಿ ಸಮಾನತೆ ಬರಬೇಕಾದರೆ ಎಲ್ಲ ವ್ಯವಸ್ಥೆ ಕೂಡ ಸರಕಾರ ಅಧೀನದಲ್ಲಿ ಇರಬೇಕು. ಇದರಿಂದ ದಲಿತರಿಗೆ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯವಾಗುತ್ತದೆ. ಆದರೆ ಮನುವಾದಿಗಳು ಮೀಸಲಾತಿಯನ್ನೇ ನಾಶ ಮಾಡಲು ಎಲ್ಲ ವ್ಯವಸ್ಥೆಗಳನ್ನು ಖಾಸಗೀಕರಣಗೊಳಿಸುತ್ತ ಬಂದರು. ಆದರೆ ಇಂದು ಮೀಸಲಾತಿ ಹೋರಾಟ ತೀರಾ ದುರ್ಬಲ ಆಗುತ್ತಿದೆ ಎಂದರು.

ಮೀಸಲಾತಿ ನಾಶ ಕೇವಲ ದಲಿತರ ಮಾತ್ರವಲ್ಲ ಹಿಂದುಳಿದ ವರ್ಗದವರ ಸಮಸ್ಯೆ ಕೂಡ ಆಗಿದೆ. ಆದರೆ ಬ್ರಾಹ್ಮಣಶಾಬಹಿ ವ್ಯವಸ್ಥೆ ಇಂದು ಹಿಂದುಳಿದ ವರ್ಗದವರನ್ನು ದಲಿತರ ಮೇಲೆ ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದೆ. ಖಾಸಗೀಕರಣದಲ್ಲೂ ಸಮಪಾಲು ಕೇಳುವ ಹೋರಾಟ ಮಾಡಿದರೆ ಮಾತ್ರ ದಲಿತ ಚಳವಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಸಮಾವೇಶವನ್ನು ಉದ್ಘಾಟಿಸಿದ ಮಲ್ಪೆ ಪೊಲೀಸ್ ಠಾಣೆಯ ಎಎಸ್ಸೈ ರತ್ನಾಕರ ಕೆ. ಮಾತನಾಡಿ, ಅಂಬೇಡ್ಕರ್ ಆಶಯದಂತೆ ದಲಿತರೆಲ್ಲ ಒಗ್ಗೂಡಿ ತಮ್ಮ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಹೋರಾಟ ಮಾಡಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ದಲಿತ ಸಮುದಾಯದ ಆಶೋತ್ತರಗಳನ್ನು ಕಾಪಾಡುವಂತಾಗಬೇಕು ಎಂದು ಹೇಳಿದರು.

ದಸಂಸ ಉಡುಪಿ ತಾಲ್ಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ದಲಿತ ಮುಖಂಡ ಸುಂದರ್ ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಎಸ್.ಪ್ರಸಾದ್, ಉಡುಪಿ ಮಹಿಳಾ ಪೊಲೀಸ್ ಠಾಣೆಯ ಎಎಸ್ಸೈ ಕೆ.ಮುಕ್ತ ಮಾತನಾಡಿದರು.

ವೇದಿಕೆಯಲ್ಲಿ ದಸಂಸ ಪಡುಬಿದ್ರಿ ವಲಯದ ಪ್ರಧಾನ ಸಂಚಾಲಕ ಲೋಕೇಶ್ ಕಂಚಿನಡ್ಕ, ಮೂಡುಬೆಟ್ಟು ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಮೂಡುಬೆಟ್ಟು ಅಂಬೇಡ್ಕರ್ ಮಹಿಳಾ ಮಂಡಲದ ಅಧ್ಯಕ್ಷೆ ಜಾನಕಿ ಶಂಕರ್‌ದಾಸ್, ಆಶ್ರಯದಾತ ಆಟೋ ಯೂನಿ ಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು, ದಸಂಸ ಮುಖಂಡ ವಿಜಯ್ ಉಪಸ್ಥಿತರಿದ್ದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಭಾಸ್ಕರ್ ಮಾಸ್ತರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಚೆನ್ನಂಗಡಿ ವಂದಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಶಂಕರ್‌ದಾಸ್ ಚೆಂಡ್ಕಳ ಕಾರ್ಯಕ್ರಮ ನಿರೂಪಿಸಿದರು.

‘ದಲಿತರ ಮಕ್ಕಳು ಹೈಟೆಕ್ ಕೂಲಿಗಳು’
ಸ್ವಾತಂತ್ರ ದೊರೆತ ನಂತರ ರಾಜಕಾರಣಿಗಳು ತಮ್ಮ ರಾಜಕೀಯ ಲಾಭ ಹಾಗೂ ಮತ ಬ್ಯಾಂಕಿಗಾಗಿ ಸ್ಪರ್ಶ ಜಾತಿಗಳನ್ನು ಅಸ್ಪಶ್ಯ ಜಾತಿಗಳ ಪಟ್ಟಿಗೆ ಸೇರಿಸಿಕೊಂಡು ಬಂದರು. ಇದರಿಂದ ನಿಜವಾದ ಅಸ್ಪಶ್ಯರು ಅಸ್ಪಶ್ಯರಾಗಿಯೇ ಉಳಿದುಕೊಳ್ಳುವಂತಾಯಿತು. ಇದರಿಂದ ಸ್ವಾತಂತ್ರ ದೊರೆತು ಏಳೂವರೆ ದಶಕ ಕಳೆದರೂ ಇಂದು ಅಸ್ಪಶ್ಯರ ಮಗ ಐಎಎಸ್, ಐಪಿಎಸ್ ಕೋರ್ಸ್‌ಗಳನ್ನು ಮಾಡಲು ಆಗುತ್ತಿಲ್ಲ. ದಲಿತರ ಮಕ್ಕಳು ಪದವಿ ಪಡೆದರೂ ಕೆಲಸ ಇಲ್ಲದೆ ಹೈಕೆಟ್ ಕೂಲಿಯಾಗಿ ಪರಿವರ್ತನೆಯಾಗುತ್ತಿದ್ದಾರೆ. ಆದುದರಿಂದ ಅಸ್ಪಶ್ಯರು ಇಂದಿಗೂ ಅಸ್ಪಶ್ಯರಾಗಿಯೇ ಉಳಿದುಕೊಂಡಿದ್ದಾರೆ ಎಂದು ನಾರಾಯಣ ಮಣೂರು ಕಟುವಾಗಿ ಟೀಕಿಸಿದರು.

‘ದಲಿತರ ಪ್ರಗತಿಗೆ ಕಾರಣ ಸಂವಿಧಾನವೇ ಹೊರತು ದೇವರಲ್ಲ’
ನಾವು ಇಂದು ದೇವರು ಎಂಬ ಭಯದಲ್ಲಿ ಬದುಕುತ್ತಿದ್ದೇವೆ. 5000 ವರ್ಷ ಗಳಿಂದ ಶೇ.97ರಷ್ಟು ಬಹುಸಂಖ್ಯಾತರಲ್ಲಿ ದೇವರು ಎಂಬ ಭಯವನ್ನು ಸೃಷ್ಠಿಸಿ, ಬೇರೆ ಆಲೋಚನೆ ಮಾಡದ ವ್ಯವಸ್ಥೆಗೆ ತಳ್ಳಲಾಗಿದೆ. ಪ್ರತಿ ದಲಿತ ಕಾಲೋನಿಗಳಲ್ಲಿ ಸರಕಾರಿ ಹಣದಿಂದ ಭಜನ ಮಂದಿರ ನಿರ್ಮಿಸಿಕೊಡಲಾಗಿದೆ. ಇದರ ಪರಿಣಾಮ ದಲಿತರು ದೇವರು ಒಳ್ಳೆಯದು ಮಾಡುತ್ತಾನೆ ಎಂಬ ಕಲ್ಪನೆಯಲ್ಲಿ ಭಜನೆ ಮಾಡುತ್ತಿದ್ದಾರೆ. ಆದರೆ ಯಾವ ದೇವರು ಕೂಡ ದಲಿತರಿಗೆ ಏನು ಮಾಡಿಲ್ಲ. ದಲಿತರು ಇಂದು ಈ ಮಟ್ಟದಲ್ಲಿ ಬದುಕಲು ಅಂಬೇಡ್ಕರ್ ಬರೆದ ಸಂವಿಧಾನದ ಅನುಕೂಲವೇ ಹೊರತು ಯಾವುದೇ ದೇವರಲ್ಲ. ಪೂಜೆಯಿಂದ ಶಿಕ್ಷಣ, ಮನೆ, ಅಂತಸ್ತು ಪಡೆಯಲು ಸಾಧ್ಯವಿಲ್ಲ. ವೈದಿಕರನ್ನು ಅನುಕರಣೆ ಮಾಡುವುದರಿಂದ ದಲಿತರಿಗೆ ಯಾವುದೇ ಅನುಕೂಲ ಆಗಲ್ಲ ಎಂದು ದಲಿತ ಚಿಂತಕ ನಾರಾಯಣ ಮಣೂರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News