ಕೆಥೊಲಿಕ್ ಸಭಾದಿಂದ ಸ್ವಉದ್ಯೋಗ ಪ್ರೇರಣೆ -ಮಾಹಿತಿ ಶಿಬಿರ

Update: 2019-08-18 11:43 GMT

ಉಡುಪಿ, ಆ.18: ಹುಟ್ಟೂರಿನಲ್ಲಿ ಸ್ವಉದ್ಯೋಗ ಮಾಡುವುದರೊಂದಿಗೆ ಇತರರಿಗೆ ಕೂಡ ಉದ್ಯೋಗ ನೀಡಿ ಸೇವೆ ಸಲ್ಲಿಸಿದಾಗ ಸಿಗುವ ಸಾಮಾಜಿಕ ಗೌರವ ಎಲ್ಲಕ್ಕಿಂತಲೂ ಮಿಗಿಲಾದುದು ಎಂದು ಮಣಿಪಾಲದ ಅಬಿದೀಪ್ ಗ್ರೂಪ್‌ನ ಆಡಳಿತ ನಿರ್ದೇಶಕ ವಿನ್ಸೆಂಟ್ ಪಿಂಟೊ ಹೇಳಿದ್ದಾರೆ.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ರವಿವಾರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ಸ್ವ ಉದ್ಯೋಗ ಪ್ರೇರಣೆ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು.

ಕ್ರೈಸ್ತ ಸಮುದಾಯ ಯುವಕರು ಶಿಕ್ಷಣ ಮುಗಿಸಿದ ಕೂಡಲೇ ಉದ್ಯೋಗ ಅರಸಿ ವಿದೇಶಕ್ಕೆ ಹೋಗುವುದು ಸಾಮಾನ್ಯ. ಅದರ ಬದಲು ಊರಿನಲ್ಲಿ ಸ್ವ ಉದ್ಯೋಗವನ್ನು ಮಾಡಿ ತಮ್ಮ ಜೊತೆಯಲ್ಲಿ ಇತರರಿಗೆ ಉದ್ಯೋಗ ನೀಡುವುದರೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಹೆತ್ತವರು ಕೂಡ ತಮ್ಮ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕು ಎಂದರು.

ಉಡುಪಿ ಜಿಲ್ಲಾ ಸಿಡೋಕ್ ಸಂಸ್ಥೆಯ ವ್ಯವಸ್ಥಾಪಕ ಪ್ರಥ್ವಿರಾಜ್ ಮತ್ತು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಕೈಗಾರಿಕಾ ವಿಸ್ತರಣಾಧಿಕಾರಿ ಸತೀಶ್ ಸ್ವಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷ ರಾಬರ್ಟ್ ಮಿನೇಜಸ್ ವಹಿಸಿದ್ದರು.

ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಉದ್ಯಾವರ ಚರ್ಚಿನ ಲಾರೆನ್ಸ್ ಡೆಸಾ, ಕೆಥೊಲಿಕ್ ಸಭಾ ಉಡುಪಿ ವಲಯ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕೆಥೊಲಿಕ್ ಸಭಾ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News