ಸಂತ್ರಸ್ಥರಿಗೆ ಸರಕಾರ ಘೋಷಿಸಿರುವ ಪರಿಹಾರ ಎಲ್ಲಿಗೂ ಸಾಲದು: ಕುಮಾರಸ್ವಾಮಿ

Update: 2019-08-18 12:40 GMT

ಬೆಳ್ತಂಗಡಿ: ಪ್ರವಾಹದಲ್ಲಿ ಎಲ್ಲವನ್ನು ಕಳೆದುಕೊಂಡವರಿಗೆ ಮತ್ತೆ ಬದುಕನ್ನು ಕಟ್ಟಿಕೊಡುವ ಕಾರ್ಯವನ್ನು ರಾಜ್ಯ ಸರಕಾರ ಮುಂದೆ ನಿಂತು ಮಾಡಬೇಕಾಗಿದೆ. ಮಡಿಕೇರಿಯಲ್ಲಿ ಕಳೆದ ಬಾರಿ ಪ್ರವಾಹವಾದಾಗ ಸರಕಾರ ಸ್ಪಂದಿಸಿದ ಮಾದರಿಯನ್ನು ಇಟ್ಟುಕೊಂಡು ಕೆಲಸಮಾಡುವಂತೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರಕಾರವನ್ನು ಒತ್ತಾಯಿಸಿದರು. 

ಪ್ರವಾಹದ ಬಗ್ಗೆ ಅದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಅವರು ಬಳಿಕ ಪ್ರವಾಹ ಸಂತ್ರಸ್ಥರೊಂದಿಗೆ ಚಾರ್ಮಾಡಿ ಗ್ರಾಮಪಂಚಾಯತಿನಲ್ಲಿ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು ಈ ಪ್ರದೇಶದಲ್ಲಿ ಸುಮಾರು 60 ಕ್ಕೂ ಅಧಿಕ ಮನೆಗಳು ನಾಶವಾಗಿದೆ ಸಾಕಷ್ಟು ನಷ್ಟ ಸಂಭವಿಸಿದೆ. ಸರಕಾರ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು ಇದೀಗ ತಾತ್ಕಾಲಿಕವಾಗಿ ಆಗಬೇಕಾಗಿರುವ ಪರಿಹಾರ ಕಾರ್ಯಗಳು ನಡೆದಿದೆ. ಆದರೆ ಶಾಶ್ವತ ಪರಿಹಾರ ಕಾರ್ಯ ನಡೆಯಬೇಕಾಗಿದೆ. ಎಲ್ಲವನ್ನೂ ಕಳೆದುಕೊಂಡವರಿಗೆ ಕೂಡಲೇ ಕನಿಷ್ಟ 50 ಸಾವಿರ ಪರಿಹಾರಧನ ನೀಡಬೇಕಾಗಿದೆ. ಮನೆಗಳನ್ನು ಕಳೆದುಕೊಂಡವರಿಗೆ ಮನೆ ಕಟ್ಟಲು ಕನಿಷ್ಟ ಹತ್ತು ಲಕ್ಷ ರೂ. ನೀಡಬೇಕು. ಸರಕಾರ ಘೋಷಿಸಿರುವ ಪರಿಹಾರ ಎಲ್ಲಿಗೂ ಸಾಲದು. ಇದನ್ನು ಪುನರ್ಪರಿಶೀಲಿಸಿಸಬೆಕಾಗಿದೆ, ಸರಕಾರದಿಂದ ಜನಪರವಾದ ತೀರ್ಮಾನಗಳು ಕೂಡಲೇ ಬರಬೇಕಾಗಿದೆ ಎಂದರು. 

ಪಕ್ಷ, ಸರಕಾರ ಮುಖ್ಯವಲ್ಲ. ಸಂತ್ರಸ್ಥರಿಗೆ ನೆರವಾಗುವುದು ಮುಖ್ಯವಾಗಿದೆ. ರಾಜ್ಯದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಸಂತ್ರಸ್ಥರಾಗಿದ್ದಾರೆ, ಯಾರೂ ಆತಂಕಕ್ಕೆ ಒಳಗಾಗುವ, ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಬದುಕು ಕಳೆದುಕೊಂಡವರಿಗೆ ಹೊಸ ಬದುಕನ್ನು ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತೇನೆ ಹಾಗೂ ಸರಕಾರದಿಂದ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮಡಿಕೇರಿಯಲ್ಲಿ ಮನೆ ಕಳೆದುಕೊಂಡ ಸುಮಾರು 900 ಕುಟುಂಬಗಳಿಗೆ ಉತ್ತಮವಾದ ಮನೆಗಳನ್ನು ಕಟ್ಟಿಕೊಡಲಾಗಿದೆ. ಅದೇ ರೀತಿ ಕೂಡಲೇ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕುಮಾರಸ್ವಾಮಿಯವರ ಮುಂದೆ ಸಂತ್ರಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಕುಮಾರಸ್ವಾಮಿಯವರು ಬೆಂಗಳೂರಿನ ಶಾಸಕ ಮಂಜುನಾಥ್ ನೇತೃತ್ವದಲ್ಲಿ ನೆರೆ ಸಂತ್ರಸ್ಥರಿಗೆ ಸಂಗ್ರಹಿಸಿದ ಅಗತ್ಯ ಪರಿಕರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಾಸಕ ಸಾ.ರಾ ಮಹೇಶ್, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ತಹಶೀಲ್ದಾರ್ ಗಣಪತಿಶಾಸ್ತ್ರಿ. ಚಾರ್ಮಾಡಿ. ಗ್ರಾ.ಪಂ ಅಧ್ಯಕ್ಷೆ ಶೈಲಜ, ಪಕ್ಷದ ಮುಖಂಡರುಗಳಾದ ಎಂಬಿ ಸದಾಶಿವ, ಜಗನ್ನಾಧಗೌಡ ಅಡ್ಕಾಡಿ, ಅಕ್ಷಿತ್ ಸುವರ್ಣ, ಸಿಂಧೂದೇವಿ, ಶ್ರೀನಿವಾಸಗೌಡ ಪಟ್ರಮೆ, ನಾಗರಾಜ್ ಹೆಚ್. ಎನ್. ರಾಮ ಆಚಾರಿ, ಸೂರಜ್ ವಳಂಬ್ರ ಹಗೂ ಇತರರು ಇದ್ದರು. 

ನಮ್ಮ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನೂ ಕಳೆದುಕೊಂಡಿದ್ದೇವೆ. ಬಟ್ಟೆಬರೆಗಳು ಪಾತ್ರಗಳು ಮನೆಯಲ್ಲಿದ್ದ ಮಕ್ಕಳ ಪುಸ್ತಕ ಸಾಮಾಗ್ರಿಗಳು ಎಲ್ಲವೂ ಹೋಗಿದೆ. ನಾಮ್ಮ ತೋಟದಲ್ಲಿ ಸಂಪೂರ್ಣವಾಗಿ ಮರಳು ತುಂಬಿಕೊಂಡಿದೆ. ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದವು, ಇದೀಗ ಮೇವೇ ಸಿಗುವುದಿಲ್ಲ ದನಗಳನ್ನು ಸಾಕಲು ಸಾಧ್ಯವಿಲ್ಲದಂತಹ ಸ್ಥಿತಿಯಿದೆ ಆದ್ದರಿಂದ ದನಗಳನ್ನು ಸಂಬಂಧಿಕರ ಮನೆಗೆ ಕೊಂಡುಹೋಗಿ ಕಟ್ಟಿದ್ದೇವೆ. ಹೇಗೆ ಬದುಕನ್ನು ನಡೆಸಬೇಕು ಎಂಬುದು ನಮಗೇ ತಿಳಿದಿಲ್ಲ.  
ಶಕುಂತಲ, ಸಂತ್ರಸ್ಥೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News